ಕರ್ನಾಟಕ

karnataka

ETV Bharat / state

ಗಣಿ ಉದ್ಯಮಿಗಳ ಅಲೆದಾಟ ತಪ್ಪಿಸಲು ಸಿಂಗಲ್‌ ವಿಂಡೋ ಸಿಸ್ಟಂ ಏ. ಅಂತ್ಯದೊಳಗೆ ಜಾರಿ : ಸಚಿವ ನಿರಾಣಿ

ಕಾರ್ಮಿಕರು ಮತ್ತು ಉದ್ಯಮಿದಾರರು ಮನವಿ ಸಲ್ಲಿಸಿದಲ್ಲಿ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗುವುದು. ಗಣಿಗಾರಿಕೆಗೆ ಅನುಮತಿ ಪಡೆಯಲು ಉದ್ಯಮಿಗಳ ಅಲೆದಾಟ ತಪ್ಪಿಸಲು ಮುಂದಿನ ತಿಂಗಳಿನಿಂದ ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಲಾಗುವುದು..

News Sand policy will be implemented by April end
ಸಚಿವ ಮುರುಗೇಶ್ ನಿರಾಣಿ

By

Published : Apr 11, 2021, 5:10 PM IST

ಕಲಬುರಗಿ :ಮರಳು ಮಾಫಿಯಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಏಪ್ರಿಲ್ ಅಂತ್ಯಕ್ಕೆ ಹೊಸ ಮರಳು ನೀತಿ ಜಾರಿ ಮಾಡಲಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಮರಳು ಮಾಫಿಯಾಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಮರಳು ದೊರೆಯುವಂತಾಗಲು ಏಪ್ರಿಲ್ ಅಂತ್ಯದೊಳಗಾಗಿ “ಹೊಸ ಮರಳು ನೀತಿ” ರಾಜ್ಯದಲ್ಲಿ ಜಾರಿಗೆ ತರಲಾಗುವುದು. ಹೊಸ ನೀತಿಯ ಅನ್ವಯ 10 ಲಕ್ಷ ರೂ. ವರೆಗಿನ ಕಟ್ಟಡ, ಮನೆಗಳಿಗೆ ಪ್ರತಿ ಟನ್‍ಗೆ ಕೇವಲ 100 ರೂ. ಪಡೆದು ರಿಯಾಯಿತಿ ದರದಲ್ಲಿ ಮರಳು ನೀಡಲಾಗುವುದು. 10 ಲಕ್ಷ ರೂ. ಮೀರಿದ ಕಟ್ಟಡಗಳಿಗೆ ರಾಯಲ್ಟಿ ಆಧಾರದಲ್ಲಿ ಹಣ ಪಾವತಿಸಿ ಮರಳು ಪಡೆಯಬಹುದಾಗಿದೆ ಎಂದರು.

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದ ಕ್ವಾರಿಗಳಲ್ಲಿ ಸ್ಫೋಟ ಸಂಭವಿಸಿದ ದುರಂತ ನಡೆದಿರುವುದರಿಂದ ರಾಜ್ಯಾದ್ಯಂತ ಗಣಿಗಾರಿಕೆಗೆ ಸಿಡಿಮದ್ದು ಬಳಕೆ, ಸಾಗಾಟ ಹಾಗೂ ಸಂಗ್ರಹಣೆ ಕುರಿತು ಕ್ವಾರಿ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಸಲಾಗುತ್ತಿದೆ.

ನೂತನ ಮರಳು ನೀತಿ ಕುರಿತಂತೆ ಸಚಿವ ಮುರುಗೇಶ್ ನಿರಾಣಿ ಮಾತನಾಡಿರುವುದು..

ರಾಜ್ಯದಲ್ಲಿ ಡಿಜಿಎಂಎಸ್‌ (ಡೈರೆಕ್ಟರ್ ಜನರಲ್ ಆಫ್ ಮೈನಿಂಗ್ ಸೆಕ್ಯೂರಿಟಿ) ಅನುಮತಿ ಇಲ್ಲದೆ ನಡೆಸುತ್ತಿರುವ 2,500 ಗಣಿಗಾರಿಕೆಗಳಿದ್ದವು. ಇವರೆಲ್ಲರಿಗೂ ಡಿಜಿಎಂಎಸ್​ನಿಂದ ಅನುಮತಿ ಪಡೆದು ಗಣಿಗಾರಿಕೆ ನಡೆಸಲು ನೋಟಿಸ್ ನೀಡಲಾಗಿದೆ ಎಂದರು.

ಓದಿ : ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಅನಿವಾರ್ಯ: ಯತ್ನಾಳ್

ಗಣಿಗಾರಿಕೆಯನ್ನು ವೈಜ್ಞಾನಿಕ ರೀತಿ ನಡೆಸಲು ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡುವ ಸಲುವಾಗಿ ಆಯವ್ಯಯದಲ್ಲಿ ಘೋಷಿಸಿದಂತೆ ಬೆಂಗಳೂರು ಮತ್ತು ಚಿತ್ರದುರ್ಗದಲ್ಲಿ “ಸ್ಕೂಲ್ ಆಫ್ ಮೈನಿಂಗ್” ತೆರೆಯಲಾಗುವುದು. ವೈಜ್ಞಾನಿಕವಾಗಿ ಕ್ವಾರಿ ಗಣಿಗಾರಿಕೆ ನಡೆಸಲು ಪ್ರಸ್ತುತ ಇರುವ ಕನಿಷ್ಟ ಮಿತಿ 1 ಎಕರೆ ಪ್ರದೇಶ ಬದಲಾಗಿ 5 ಎಕರೆ ಪ್ರದೇಶ ನಿಗದಿಪಡಿಸಲು ಚಿಂತಿಸಲಾಗಿದೆ ಎಂದರು.

ಪ್ರತಿ ಜಿಲ್ಲೆಯಲ್ಲಿ ಖನಿಜ ಭವನ :ಆಡಳಿತ ಸುಧಾರಣೆ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ 1-2 ಕೋಟಿ ರೂ. ವೆಚ್ಚದಲ್ಲಿ ಖನಿಜ ಭವನ ನಿರ್ಮಿಸಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್, ಅರಣ್ಯ ಇಲಾಖೆಯ ಮಾದರಿ ಸಮವಸ್ತ್ರ ನೀಡಲಾಗುವುದು. ಮರಳು ಭದ್ರತೆಗಾಗಿ ಮಾಜಿ ಸೈನಿಕರನ್ನು ನಿಯೋಜಿಸಲಾಗುವುದು.

ಮರಳು ಮಾರಾಟದಲ್ಲಿ ಪಾರದರ್ಶಕತೆ ತರಲು ವಾಕಿಟಾಕಿ ಬಳಕೆ, ಜಿಪಿಎಸ್ ಅಳವಡಿಕೆಯಂತಹ ಹೊಸ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಆ ಮೂಲಕ ಅಕ್ರಮ ಮರಳು ದಂಧೆಗೆ ಬ್ರೆಕ್ ಹಾಕಲಾಗುವುದು ಎಂದರು.

ಗಣಿ ಅದಾಲತ್ :ಗಣಿಗಾರಿಕೆ ಉದ್ಯಮಿಗಳ ಮತ್ತು ಕಾರ್ಮಿಕರ ಸಮಸ್ಯೆಯನ್ನು ಅವರ ಬಾಗಿಲಿಗೆ ಹೋಗಿ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ 5 ಕಡೆ “ಗಣಿ ಅದಾಲತ್” ನಡೆಸಲಾಗುತ್ತಿದೆ. ಏಪ್ರಿಲ್ 30ಕ್ಕೆ ಬೆಂಗಳೂರು, ಮೇ 15ಕ್ಕೆ ಮೈಸೂರು, ಮೇ 29ಕ್ಕೆ ಬೆಳಗಾವಿ, ಜೂನ್ 11ಕ್ಕೆ ಕಲಬುರಗಿ ಹಾಗೂ ಜೂನ್ 25ಕ್ಕೆ ಮಂಗಳೂರಿನಲ್ಲಿ ಅದಾಲತ್ ನಡೆಯಲಿದೆ.

ಇದಕ್ಕೆ ಪೂರಕವಾಗಿ ಕಾರ್ಮಿಕರು ಮತ್ತು ಉದ್ಯಮಿದಾರರು ಮನವಿ ಸಲ್ಲಿಸಿದಲ್ಲಿ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗುವುದು. ಗಣಿಗಾರಿಕೆಗೆ ಅನುಮತಿ ಪಡೆಯಲು ಉದ್ಯಮಿಗಳ ಅಲೆದಾಟ ತಪ್ಪಿಸಲು ಮುಂದಿನ ತಿಂಗಳಿನಿಂದ ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ABOUT THE AUTHOR

...view details