ಕಲಬುರಗಿ: ಸಾಮಾನ್ಯವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಎಲ್ಲೆಂದರಲ್ಲಿ ಕಸ ಬಿಸಾಡಿದರೆ ದಂಡ ವಿಧಿಸುವುದನ್ನು ನೋಡಿದ್ದೇವೆ, ಹಾಗೂ ಕೇಳಿದ್ದೇವೆ. ಆದರೆ, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛ ನಗರಕ್ಕಾಗಿ ವಿನೂತನ ಯೋಜನೆಯೊಂದನ್ನು ರೂಪಿಸಿದ್ದಾರೆ. ಆ ಪ್ಲಾನ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
ಕಲಬುರಗಿ ಮಹಾನಗರ ದಿನೇ ದಿನೇ ಬೆಳೆಯುತ್ತಲೇ ಇದೆ. ನಗರ ಬೆಳೆದಂತೆ ಕಸನಿರ್ವಹಣೆ ಜವಾಬ್ದಾರಿ ಕೂಡ ಹೆಚ್ಚಾಗುತ್ತಿದೆ. ಆದ್ರೆ ಕಸ ಸಂಗ್ರಹಿಸಿ ವಿಲೇವಾರಿ ಮಾಡುವುದೇ ಪಾಲಿಕೆಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾಕಂದ್ರೆ ಎಷ್ಟೇ ಜಾಗೃತಿ ಮೂಡಿಸಿದರೂ, ಮನೆ ಬಾಗಿಲಿಗೆ ವಾಹನಗಳನ್ನು ಕಳಿಸಿದರೂ ಸಾರ್ವಜನಿಕರು ಮಾತ್ರ ರಸ್ತೆ ಬದಿ ಕಸ ಹಾಕುವುದನ್ನು ನಿಲ್ಲಿಸುತ್ತಿಲ್ಲ. ಇದರಿಂದ ಹೈರಾಣಾಗಿರುವ ಪಾಲಿಕೆ ಈಗ ಸೂಪರ್ ಯೋಜನೆಯೊಂದನ್ನು ರೂಪಿಸಿದೆ. ಈ ಮೂಲಕ ಕಸ ಮನೆಯಲ್ಲಿಯೇ ಸಂಗ್ರಹಿಸಿಟ್ಟು ಪಾಲಿಕೆ ವಾಹನ ಬಂದಾಗ ಹಾಕಲು ಜನರನ್ನು ಪ್ರೇರೇಪಿಸಲಾಗುತ್ತಿದೆ.
ಬಿಸಿಲೂರು ಕಲಬುರಗಿ ನಗರ ಈಗ 8 ಲಕ್ಷ ಜನ ಸಂಖ್ಯೆಯ ಆಸುಪಾಸಿನಲ್ಲಿದೆ. ಈಗಾಗಲೇ ಸುಮಾರು 200 ಕಿ.ಮೀ ವ್ಯಾಪ್ತಿಯಲ್ಲಿ ಸಿಟಿ ವಿಸ್ತರಿಸಿದೆ. ಸಿಟಿ ಬೆಳದಂತೆ ಕಸದ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಪಾಲಿಕೆ ಸೂಕ್ತವಾಗಿ ಕಸ ನಿರ್ವಹಣೆ ಮಾಡುತ್ತಿದೆ. ಆದ್ರೆ ಸಾರ್ವಜನಿಕರು ಮಾತ್ರ ಪಾಲಿಕೆಯೊಂದಿಗೆ ಸರಿಯಾಗಿ ಕೈ ಜೋಡಿಸುತ್ತಿಲ್ಲ. ಇದನ್ನು ತಪ್ಪಿಸಲು ಪಾಲಿಕೆ ರಂಗೋಲಿ ಹಾಕುವ ಯೋಜನೆ ಹಾಕಿಕೊಂಡಿದೆ. ಅಂದಹಾಗೆ ಹಿಂದೂ ಧರ್ಮದಲ್ಲಿ ರಂಗೋಲಿಗೆ ಅದರದೆಯಾದ ಪ್ರಾಮುಖ್ಯತೆ ಇದೆ. ರಂಗೋಲಿಯನ್ನು ದೇವರ ರೂಪದಲ್ಲಿ ಕಾಣಲಾಗುತ್ತದೆ. ಇದನ್ನೆ ಸರಿಯಾಗಿ ಉಪಯೋಗಿಸಿಕೊಂಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಬೀದಿಬದಿ ಕಸ ಹಾಕುವ ಪ್ರದೇಶವನ್ನು ಸ್ವಚ್ಛಗೊಳಿಸಿ ಅಂತಹ ಸ್ಥಳಗಳಲ್ಲಿ ಪಾಲಿಕೆ ಪೌರ ಕಾರ್ಮಿಕ ಮಹಿಳೆಯರಿಂದ ಸುಂದರ ರಂಗೋಲಿ ಹಾಕಿಸುತ್ತಿದ್ದಾರೆ.
ಜಾಗೃತಿ ಮೂಡಿಸಬಲ್ಲ ರಂಗೋಲಿ:ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 55 ವಾರ್ಡ್ಗಳಿವೆ. ಬಹುತೇಕ ವಾರ್ಡ್‌ಗಳಲ್ಲಿ ರಂಗೋಲಿ ಹಾಕುವ ಪ್ಲ್ಯಾನ್ ಜಾರಿಗೆ ತರಲಾಗಿದೆ. ಬೀದಿ ಬದಿಯ ಕಸ ತೆರವುಗೊಳಿಸಿದ ನಂತರ ಸ್ವಚ್ಛಂದವಾದ ಚಿತ್ರಗಳು, ಗಾಂಧೀಜಿ ಚಿತ್ರ, ಸ್ವಚ್ಛ ಭಾರತ ಅಭಿಯಾನ ಸೇರಿ ಜಾಗೃತಿ ಮೂಡಿಸಬಲ್ಲ ಶಬ್ದಗಳನ್ನು ಬರೆಯಲಾಗುತ್ತಿದೆ.