ಸೇಡಂ:ಸಣ್ಣ ಪುಟ್ಟ ಕಾಯಿಲೆಗಳಿಗೆ ಭಯಪಡುವ ಜನರಿಗಾಗಿ ಸರ್ಕಾರ ಫೀವರ್ ಕ್ಲಿನಿಕ್ ಆರಂಭಿಸಿದ್ದು, ಇದರಿಂದಲೇ ಕೋವಿಡ್-19 ಪರೀಕ್ಷೆ ಕೂಡ ನಡೆಸಬಹುದಾಗಿದೆ.
ತಾಲೂಕು ಆರೋಗ್ಯ ಇಲಾಖೆ ಪಟ್ಟಣದ ಹಳೇ ಸರ್ಕಾರಿ ಆಸ್ಪತ್ರೆಯಲ್ಲಿ ಹೊಸದಾಗಿ ಸುಸಜ್ಜಿತ ಫೀವರ್ ಕ್ಲಿನಿಕ್ ಆರಂಭಿಸಿದೆ. ನೆಗಡಿ, ಕೆಮ್ಮು, ಜ್ವರದಿಂದ ಬಳಲುವವರು ನೇರವಾಗಿ ಈ ಕ್ಲಿನಿಕ್‌ಗೆ ಭೇಟಿ ನೀಡಿದರೆ ನಿಮ್ಮೆಲ್ಲಾ ಅನುಮಾನಗಳು ದೂರಾಗಲಿವೆ. ಜೊತೆಗೆ ನೀವು ಕೋವಿಡ್ ಸೋಂಕಿಗೆ ಒಳಗಾಗಿದ್ದರೆ ಇಲ್ಲಿಂದಲೇ ಗಂಟಲು ದ್ರವ ಪಡೆದು ಪರಿಶೀಲನೆಗೂ ಕಳುಹಿಸಲಾಗುತ್ತದೆ.
ಹೈದರಾಬಾದ್, ಬೆಂಗಳೂರು, ಪೂನಾ, ಮುಂಬೈ, ದೆಹಲಿ ಹೀಗೆ ಹೊರ ರಾಜ್ಯಗಳಿಂದ ಬಂದವರು ಮೊದಲಿಗೆ ಈ ಫೀವರ್ ಕ್ಲಿನಿಕ್‌ಗೆ ಭೇಟಿ ನೀಡುವುದು ಕಡ್ಡಾಯವಾಗಿದೆ. ಪರೀಕ್ಷೆಗೆ ಒಳಪಟ್ಟ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು.
ಸಣ್ಣ ಪುಟ್ಟ ಕಾರಣಗಳಿಂದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ಜನ ಅಲೆಯುವುದನ್ನು ತಪ್ಪಿಸಲು ಸರ್ಕಾರ ಫೀವರ್ ಕ್ಲಿನಿಕ್ ಆರಂಭಿಸಿದೆ. ಇದರಿಂದ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಬಹುದಾಗಿದೆ ಎನ್ನುತ್ತಾರೆ ತಾಲೂಕು ಆರೋಗ್ಯಾಧಿಕಾರಿ ಡಾ. ರಾಕೇಶ್ ಕಾಂಬ್ಳೆ.
ಸೇಡಂನಲ್ಲಿ ಕೊರೊನಾ ಪತ್ತೆಗಾಗಿ ಫೀವರ್ ಕ್ಲಿನಿಕ್