ಕಲಬುರಗಿ:ತೊಗರಿ ಗಿಡಗಳಿಗೆ ನೆಟೆ ರೋಗ ಅಂಟಿದ ಪರಿಣಾಮ ಅವು ಒಣಗಿ ಹೋಗಿವೆ. ಹೀಗಾಗಿ ಕಲಬುರಗಿ ಜಿಲ್ಲೆಯ ಅನ್ನದಾತರು ಕಂಗಾಲಾಗಿದ್ದಾರೆ. ಸರ್ಕಾರದ ಗಮನ ಸೆಳೆಯಲು ಜಿಲ್ಲೆಯ ರೈತರು ಇಂದು ಒಣಗಿದ ಗಿಡಗಳ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಜಿಲ್ಲೆಯ ವಿವಿಧೆಡೆಯಿಂದ ನೆಟೆ ರೋಗದಿಂದ ಒಣಗಿ ನಿಂತ ತೊಗರಿ ಗಿಡಗಳ ಸಮೇತವಾಗಿ ರೈತರು ಆಗಮಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ತೊಗರಿ ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿದ್ದರೂ, ಇಲ್ಲಿವರೆಗೆ ಕಂದಾಯ ಇಲಾಖೆ ಅಥವಾ ಕೃಷಿ ಇಲಾಖೆಯಿಂದ ಸಮೀಕ್ಷೆ ಕಾರ್ಯ ನಡೆದಿಲ್ಲ. ವಿಮಾ ಕಂಪನಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದ ರೈತರು ಬರುವ 15 ದಿನಗಳಲ್ಲಿ ಸಮೀಕ್ಷೆ ಮುಗಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ನಿರ್ಲಕ್ಷ್ಯ ತೋರಿದರೆ ರೈತರು ಸಾಮೂಹಿಕ ಆತ್ಮಹತ್ಯೆಯಂತ ಗಂಭೀರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.