ಕಲಬುರಗಿ: ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ದೇಶದ ಅರಣ್ಯ ಸೇವೆಯಲ್ಲಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವೆ ಶ್ಲಾಘನೀಯವಾಗಿದೆ ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಗೋಪಾಲ ಕೃಷ್ಣ ಹೇಳಿದ್ದಾರೆ.
ಅರಣ್ಯ ಭವನದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪರೇಡ್ ವಂದನೆ ಸ್ವೀಕರಿಸಿ ಮಾತನಾಡಿದ ಅವರು, 1730 ಸೆಪ್ಟೆಂಬರ್ 11 ರಂದು ಜೋಧ್ಪುರ್ನ ಅಭಯಸಿಂಗ್ ರಾಜನ ಸೈನಿಕರು ಹೊಸ ಅರಮನೆ ನಿರ್ಮಾಣಕ್ಕೆ ಕೆಜರ್ಲಿ ಪ್ರಾಂತ್ಯದಲ್ಲಿದ್ದ ಕೆರ್ಜಿ ಮರಗಳನ್ನು ಕಡಿಯಲು ಹೋದಾಗ ಮರಗಳನ್ನು ಕಡಿಯದಂತೆ ವಿರೋಧಿಸಿದ ಅಲ್ಲಿನ ಬಿಷ್ಣೋಯಿ ಸಮುದಾಯದ 363 ಪುರುಷ, ಮಹಿಳೆ ಮತ್ತು ಮಕ್ಕಳನ್ನು ಕೊಲ್ಲಲಾಯಿತು. ಅವರ ತ್ಯಾಗ ಬಲಿದಾನವನ್ನು ಸ್ಮರಿಸಲೆಂದೆ ಭಾರತ ಸರ್ಕಾರವು ರಾಷ್ಟ್ರೀಯ ಅರಣ್ಯ ಹುತಾತ್ಮ ದಿನವೆಂದು ಆಚರಿಸುತ್ತಿದೆ ಎಂದರು.