ಕಲಬುರಗಿ:ಕೋವಿಡ್ನಿಂದ ಅತಿ ಹೆಚ್ಚು ಜನ ಮೃತರಾಗಿದ್ದರೆ ಅದಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಕೋವಿಡ್ ಹರಡುವಿಕೆ ಮತ್ತು ಸಾವಿಗೂ ಕಾಂಗ್ರೆಸ್ಸೇ ಹೊಣೆ. ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಸತ್ಯದಿಂದ ಕೂಡಿದೆ ಎಂದರು.
ವ್ಯಾಕ್ಸಿನ್ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡಿದೆ. ವ್ಯಾಕ್ಸಿನ್ ತಗೊಂಡ್ರೆ ಸಮಸ್ಯೆ ಆಗುತ್ತೆ ಅಂತ ಅದು-ಇದು ಹೇಳಿಕೆ ಕೊಟ್ಟರು. ಇದು ಬಿಜೆಪಿ ಲಸಿಕೆ ಇದನ್ನು ಯಾರೂ ತೆಗೆದುಕೊಳ್ಳಬಾರದು ಎಂದು ಜನರ ತಲೆಯಲ್ಲಿ ಇಲ್ಲ-ಸಲ್ಲದ ಹುಳು ಬಿಟ್ಟರು. ಕಾಂಗ್ರೆಸ್ನ ಅಪಹಾಸ್ಯದಿಂದಾಗಿ ಜನ ಭಯಭೀತರಾಗಿ ವ್ಯಾಕ್ಸಿನ್ನಿಂದ ದೂರ ಉಳಿದಿದ್ದಾರೆ. ಫೆಬ್ರುವರಿಯಲ್ಲಿ ಸ್ವತಃ ಪ್ರಧಾನಿಯವರೇ ಲಸಿಕೆ ತಗೊಂಡು ಜನರಿಗೆ ಪ್ರೇರಣೆ ನೀಡಿದರು. ಆದರೂ ಜನ ಮೇ ತಿಂಗಳ ವರೆಗೂ ಲಸಿಕೆಗಾಗಿ ಮುಂದೆ ಬರಲಿಲ್ಲ. ಈಗ ಅದೇ ಕಾಂಗ್ರೆಸ್ಸಿಗರು ಲಸಿಕೆ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದು ಕಾಂಗ್ರೆಸ್ನ ಚಿಲ್ಲರೆ ರಾಜಕಾರಣ ಎಂದು ಕಿಡಿ ಕಾರಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿದ್ರಾಮಣ್ಣನೂ ಇದಕ್ಕೆ ಹೊರತಿಲ್ಲ. ಹೈಕಮಾಂಡ್ ಏನು ಮಾಡುತ್ತೋ ಸಿದ್ರಾಮಣ್ಣ ಸಹ ಅದನ್ನೇ ಮಾಡ್ತಾರೆ. ಅಧಿಕಾರಕ್ಕೋಸ್ಕರ ಈ ರೀತಿಯ ವರ್ತನೆ ಜನ ಸಹಿಸೋದಿಲ್ಲ. ಅದಕ್ಕಾಗಿ ಜನ ಅವರನ್ನು ವರುಣಾ ಕ್ಷೇತ್ರದಿಂದ ಓಡಿಸಿದ್ದಾರೆ. ಇದೇ ರೀತಿ ಮಾಡಿದ್ರೆ ಬಾದಾಮಿಯಿಂದಲೂ ಓಡಿಸ್ತಾರೆ ಎಂದು ವ್ಯಂಗ್ಯವಾಡಿದರು.