ಕಲಬುರಗಿ :ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆಗೈದು ಬಳಿಕ ರೈಲ್ವೆ ಹಳಿಯ ಮೇಲೆ ಬಿಸಾಡಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಯುವಕನ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ಯುವಕ ಕಲಬುರಗಿಯ ಕನಕ ನಗರದ ನಿವಾಸಿ ಶಿವುಕುಮಾರ್ (25) ಎಂದು ಗುರುತಿಸಲಾಗಿದೆ. ಶಿವುಕುಮಾರ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಬಿಜೆಪಿ ಕಚೇರಿಯಲ್ಲಿ ಸಿಎಂಗೆ ಮುಜುಗರ : ಕತ್ತಲಲ್ಲಿ ಭಾಷಣ ಮಾಡಿದ ಬಸವರಾಜ ಬೊಮ್ಮಾಯಿ
ಜ. 26 ರಂದು ಶಿವುಕುಮಾರ್ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಸಾಕ್ಷಿ ನಾಶಪಡಿಸಲು ಕಲಬುರಗಿ ಸಮೀಪದ ಸಾವಳಗಿ ಬಳಿಯ ರೈಲ್ವೆ ಹಳಿಯ ಮೇಲೆ ಶವ ಬಿಸಾಡಿ ಪರಾರಿಯಾಗಿದ್ದಾರೆ. ಶವವನ್ನು ರೈಲ್ವೆ ಹಳಿಯ ಮೇಲೆ ಬಿಸಾಡಿದ್ದರಿಂದ ರೈಲು ಹರಿದು ದೇಹ ಸಂಪೂರ್ಣ ಛಿದ್ರವಾಗಿದ್ದಲ್ಲದೆ, ದೇಹದಿಂದ ರುಂಡ ಬೇರ್ಪಟ್ಟಿತ್ತು.
ಇದರಿಂದ ಮೃತ ಯುವಕನ ಗುರುತು ಪತ್ತೆ ಹಚ್ಚುವುದೆ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಮೃತ ಯುವಕನ ಬಲಗೈ ಮೇಲೆ ಹಾಕಿದ್ದ ತ್ರಿಶೂಲದ ಹಚ್ಚೆ ಆಧಾರವನ್ನಾಗಿಟ್ಟುಕೊಂಡು ಪತ್ತೆಕಾರ್ಯ ಆರಂಭಿಸಿದ ಪೊಲೀಸರು, ಇದೀಗ ಮೃತ ಯುವಕನ ಗುರುತು ಪತ್ತೆ ಹಚ್ಚಿದ್ದಾರೆ. ಸದ್ಯಕ್ಕೆ ಕೊಲೆಗೆ ಕಾರಣವೇನು? ಕೊಲೆಗಡುಕರು ಯಾರೆಂದು? ಇನ್ನೂ ತಿಳಿದು ಬಂದಿಲ್ಲ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸದ್ಯ ಯುವಕ ಯಾರೆಂದು ಪತ್ತೆಯಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.