ಕಲಬುರಗಿ:ಬಯಲು ಬಹಿರ್ದೆಸೆಗೆ ಹೋಗಿದ್ದ ಮಹಿಳೆಯೊಬ್ಬರನ್ನು ವ್ಯಕ್ತಿಯೋರ್ವ ಕೊಲೆ ಮಾಡಿ, ಬಳಿಕ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪೂರ ತಾಲೂಕಿನ ನೀಲೂರ ಗ್ರಾಮದಲ್ಲಿ ನಡೆದಿದೆ.
ಅಫಜಲಪೂರ ತಾಲೂಕಿನ ಸ್ಟೇಷನ್ ಗಾಣಗಾಪೂರದ ನಿವಾಸಿ ಪೋಸಯ್ಯ ಕಲ್ಯಾಣಕರ್ ಮಹಿಳೆ ಕೊಲೆ ಮಾಡಿದ ವ್ಯಕ್ತಿ. ಈತ ವೃತ್ತಿಯಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿದ್ದ. ತನ್ನ ವೃತ್ತಿ ಆಯ್ತು, ತಾನಾಯ್ತು ಅಂತ ಇರಬೇಕಾದ ಈತ ಮಾಡಿದ್ದು ಮಾತ್ರ ಅನಾಚಾರ ಕೆಲಸ. ಮಹಿಳೆಯ ಕೊಲೆ ಮಾಡಿದಲ್ಲದೇ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಫಜಲಪೂರ ತಾಲೂಕಿನ ನೀಲೂರ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗಿದ್ದ ಲಕ್ಷ್ಮೀಬಾಯಿ ಹೂಗಾರ ಎಂಬ ಮಹಿಳೆಯ ಕತ್ತುಕೊಯ್ದು ಕೊಲೆಗೈದು ಪರಾರಿಯಾಗಿದ್ದ. ಬಳಿಕ ಆರೋಪಿ ಪೋಸಯ್ಯ ತನ್ನ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಂದಿಗಳ ಸಾಕುವ ಕೆಲಸ ಮಾಡುತ್ತಿದ್ದ ಪೊಸಯ್ಯ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ನೀಲೂರ ಗ್ರಾಮಕ್ಕೆ ಹೋಗಿದ್ದು, ಗ್ರಾಮದ ಹೊರವಲಯ ನಿರ್ಜನ ಪ್ರದೇಶದಲ್ಲಿ ಹಂದಿಗಳನ್ನು ಹುಡುಕುವುದರಲ್ಲಿ ನಿರತನಾಗಿದ್ದ.
ಬಹಿರ್ದೆಸೆಗೆ ತೆರಳಿದ್ದ ಮಹಿಳೆಯ ಬರ್ಬರ ಕೊಲೆ ಆದ್ರೆ ಅಷ್ಟೊತ್ತಿಗೆ ಬಹಿರ್ದೆಸೆಗೆಂದು ಲಕ್ಷ್ಮೀಬಾಯಿ ಹೂಗಾರ ಬಂದಿದ್ದಾರೆ. ನಿರ್ಜನ ಪ್ರದೇಶವಾದ್ದರಿಂದ ಆಕೆಯನ್ನು ಹೆದರಿಸಿ ಕೊರಳಲ್ಲಿನ ಚಿನ್ನಾಭರಣ ಕೇಳಿದ್ದಾನೆ. ಆಕೆ ಚಿನ್ನಾಭರಣ ಕೊಡಲು ನಿರಾಕರಿಸಿದಾಗ ಕಲ್ಲಿನಿಂದ ಹಲ್ಲೆಮಾಡಿ ಚಿನ್ನಾಭರಣ ದೋಚಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದಾಗ ತನ್ನ ಬಳಿಯಿದ್ದ ಹರಿತವಾದ ಕೊಯ್ತಾದಿಂದ ಆಕೆಯ ಕತ್ತು ಸಿಳಿ ರಕ್ತ ಪಿಶಾಚಿಯಂತೆ ವರ್ತಿಸಿದ್ದಾನೆ.
ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಕೊರಳಲ್ಲಿನದ್ದ ತಾಳಿ ಮತ್ತು ಚಿನ್ನದ ಸರ ಕಿತ್ತುಕೊಂಡು ಶವ ಮುಳ್ಳಿನ ಕಂಟಿಯಲ್ಲಿ ಬಿಸಾಡಿ ಹೋಗಿದ್ದಾನೆ. ಗ್ರಾಮದ ಇತರೆ ಮಹಿಳೆಯರು ಬಹಿರ್ದೆಸೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರಿಗೆ ಪೊಸಯ್ಯನ ಬಗ್ಗೆ ಸುಳಿವು ಸಿಕ್ಕಿದ್ದು, ಆತನ ಬಂಧನಕ್ಕೆ ತೆರಳಿದಾಗ ಆತ ಮನೆಯಲ್ಲಿ ಇರಲಿಲ್ಲ. ಪೊಲೀಸರು ತನ್ನ ಮನೆಗೆ ಬಂದಿರುವ ವಿಷಯ ತಿಳಿದ ಪೊಶಯ್ಯ ಹೇದರಿಕೊಂಡು ಸಂಜೆ ಏಳು ಗಂಟೆ ಸುಮಾರಿಗೆ ಮನೆಯಲ್ಲಿ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊಲೆಯಾದ ಮಹಿಳೆಯ ಕೊರಳಲ್ಲಿದ್ದ ಚಿನ್ನಾಭರಣವನ್ನು ಆರೋಪಿ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ರೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.