ಬೆಂಗಳೂರು: ಜೋಡಿ ಕೊಲೆ ಮಾಡಿ ಪರಾರಿಯಾಗಿದ್ದ ದಂಪತಿಯನ್ನು ಅರೆಸ್ಟ್ ಮಾಡುವಲ್ಲಿ ಮಹದೇವಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವೆಂಕಟೇಶ್ ಹಾಗೂ ಅರ್ಪಿತ ಬಂಧಿತರು.ಕಳೆದ ಅಕ್ಟೋಬರ್ 17ರಂದು ಗರುಡಾಚಾರ್ ಪಾಳ್ಯದ ಚಂದ್ರೇಗೌಡ ಹಾಗೂ ಲಕ್ಷ್ಮಮ್ಮ ಎಂಬ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಸೂಚನೆ ಮೇರೆಗೆ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ತಂಡ, ಇಬ್ಬರು ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.
ವೆಂಕಟೇಶ್ ಹಾಗೂ ಅರ್ಪಿತ ಬಜಾಜ್ ಫೈನಾನ್ಸ್ ಹಾಗೂ ಗೆಳೆಯರ ಬಳಿ ಸುಮಾರು 10 ಲಕ್ಷ ರೂ ಸಾಲ ಮಾಡಿದ್ದರು. ಈ ಸಾಲ ತೀರಿಸುವ ಜೊತೆಗೆ ಸ್ವಂತ ಕಾರನ್ನು ಖರೀದಿಸಿ, ಐಷಾರಾಮಿ ಜೀವನ ಸಾಗಿಸಲು ಅವರು ಕಳ್ಳತನಕ್ಕೆ ಇಳಿದಿದ್ರು. ಮದುವೆ ಸಮಾರಂಭಗಳಲ್ಲಿ ಮಕ್ಕಳಿಲ್ಲದ ಶ್ರೀಮಂತ ವೃದ್ಧರನ್ನು ಪರಿಚಯಿಸಿಕೊಂಡು ನಂತರ ಅವರ ಮನೆಗೆ ಹೋಗಿ ಅವರೊಂದಿಗೆ ಸ್ನೇಹ ಬೆಳಸ್ತಿದ್ರು. ಜೊತೆಗೆ ಟಿವಿಗಳಲ್ಲಿ ಬರುವ ಕ್ರೈಂ ಸ್ಟೋರಿಗಳನ್ನು ನೋಡಿ ಅದೇ ರೀತಿ ವೃದ್ಧರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚುತ್ತಿದ್ದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ಸುಮಾರು 1 ತಿಂಗಳ ಹಿಂದೆ ಸಂಬಂಧಿಕರ ಮದುವೆಗೆ ಚಂದ್ರೇಗೌಡ ಹಾಗೂ ಲಕ್ಷ್ಮಮ್ಮ ದಂಪತಿ ಹೋಗಿದ್ದರು. ಅದೇ ಮದುವೆಗೆ ಹೋಗಿದ್ದ ಆರೋಪಿಗಳಾದ ವೆಂಕಟೇಶ್ ಹಾಗೂ ಅರ್ಪಿತ, ಲಕ್ಷ್ಮಮ್ಮ ಧರಿಸಿದ್ದ ಒಡವೆ ನೋಡಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ನಂತರ ಚಂದ್ರೇಗೌಡರ ಮನೆಗೆ ಆಗಾಗ ಬಂದು ಅವರ ವಿಶ್ವಾಸ ಗಳಿಸಿದ್ದಾರೆ. ಮನೆಗೆ ಭೇಟಿ ನೀಡಿದ್ದ ವೇಳೆ ಚಿನ್ನಾಭರಣದ ಮಾಹಿತಿ ಪಡೆದಿದ್ದ ಆರೋಪಿಗಳು ಕೊಲೆಗೆ ಸಂಚು ರೂಪಿಸಿ, ಸ್ಕ್ಯಾನರ್ರಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ತನಿಖೆಯಲ್ಲಿ ಬಯಲಾಯ್ತು ಜುಲೈನಲ್ಲಿ ನಡೆದ ಮಂಡ್ಯ ದಂಪತಿ ಕೊಲೆ ಪ್ರಕರಣ
ಜುಲೈನಲ್ಲಿ ಮಂಡ್ಯದ ಗುಂಡೇಗೌಡ, ಲಲಿತಮ್ಮ ಕೊಲೆಯಾಗಿತ್ತು. ಆ ಕೊಲೆ ಮಾಡಿವರು ಅವರ ಪಕ್ಕದ ಮನೆಯವರೇ ಎಂದು ನಂಬಿದ್ದ ಮಂಡ್ಯ ಕೆ.ಆರ್.ಪೇಟೆ ಟೌನ್ ಪೊಲೀಸರು ಸರಿಯಾದ ವಿಚಾರಣೆ ನಡೆಸದೆ ಅಮಾಯಕನನ್ನ ಬಂಧಿಸಿ ಜೈಲಿಗಟ್ಟಿದ್ರು. ಆದ್ರೆ, ಮಹದೇವಪುರ ವೃದ್ಧ ದಂಪತಿ ಕೊಲೆ ಪ್ರಕರಣದಲ್ಲಿ ವೆಂಕಟೇಶ್ ಹಾಗೂ ಅರ್ಪಿತ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಜುಲೈನಲ್ಲಿ ಮಂಡ್ಯದ ಗುಂಡೇಗೌಡ, ಲಲಿತಮ್ಮ ಕೊಲೆ ಮಾಡಿದ್ದು ತಾವೇ ಎಂದು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.