ಕಲಬುರಗಿ:ನಗರದಲ್ಲಿ ಗುಂಡಿನ ಸದ್ದು ಕೇಳಿದೆ. ಕೊಲೆ ಪ್ರಕರಣದ ಪಂಚನಾಮೆ ವೇಳೆ ಪೊಲೀಸರ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರು ಆರೋಪಿಯ ಕಾಲಿಗೆ ಗುಂಡೇಟು ನೀಡಿ ವಶಕ್ಕೆ ಪಡೆದಿರುವ ಘಟನೆ ಗುರುವಾರ ನಡೆದಿದೆ. ಕೊಲೆ ಆರೋಪಿಯನ್ನು ಮಂಜುನಾಥ ಸ್ವಾಮಿ ಎಂದು ಗುರುತಿಸಲಾಗಿದೆ.
ಆರೋಪಿ ಮಂಜುನಾಥ ಸ್ವಾಮಿ ಬಲಗಾಲಿಗೆ ಗುಂಡೇಟಿನಿಂದ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ. ಆರೋಪಿಯ ಹಲ್ಲೆಯಿಂದ ಚೌಕ್ ಠಾಣೆಯ ಕಾನ್ಸ್‌ಟೇಬಲ್ ಸಿದ್ರಾಮಯ್ಯ ಸ್ವಾಮಿಗೆ ಗಾಯಗಳಾಗಿದ್ದು, ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು:ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಡಿಸಿಪಿ ಆಡೂರು ಶ್ರೀನಿವಾಸಲು ಸೇರಿ ಇತರೆ ಅಧಿಕಾರಿಗಳು ಭೇಟಿ ನೀಡಿದ್ದರು. ಬಳಿಕ ಚಾಕು ದಾಳಿಯಿಂದ ಗಾಯಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಿದ್ರಾಮಯ್ಯಸ್ವಾಮಿ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರಿಂದಲೂ ಅವರು ಮಾಹಿತಿ ಪಡೆದಿದ್ದಾರೆ.
ಕೊಲೆ ಆರೋಪಿ ಮಂಜುನಾಥ ಸ್ವಾಮಿ ಹಾಡಹಗಲೇ ನಡೆದ ಕೊಲೆ ಪ್ರಕರಣ: ಗುಂಡೇಟಿನಿಂದ ಆಸ್ಪತ್ರೆ ಸೇರಿರುವ ಮಂಜುನಾಥ ಸ್ವಾಮಿ ಬುಧವಾರ ಹಾಡಹಗಲೇ ಭವಾನಿ ನಗರದಲ್ಲಿ 30 ವರ್ಷದ ಪ್ರಶಾಂತ ಕುಂಬಾರ ಎಂಬಾತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಕೊಲೆಗೀಡಾದ ವ್ಯಕ್ತಿಯ ಮುಖದ ಗುರುತೂ ಸಿಗದಂತೆ ವಿರೂಪಗೊಂಡಿತ್ತು. ಪೊಲೀಸರು ಮೃತದೇಹ ಪರಿಶೀಲನೆ ನಡೆಸಿದಾಗ ಐಡಿ ಕಾರ್ಡ್ ಸಿಕ್ಕಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪೊಲೀಸರು ಆರೋಪಿಗೆ ಶೋಧ ಕಾರ್ಯ ಕೈಗೊಂಡಿದ್ದರು.
ಮಧ್ಯಾಹ್ನ ಕೊಲೆ, ಸಂಜೆ ಆರೋಪಿ ಬಂಧನ: ಐಡಿ ಕಾರ್ಡ್ ಮೂಲಕ ಕೊಲೆಯಾದ ವ್ಯಕ್ತಿ 30 ವರ್ಷದ ಪ್ರಶಾಂತ್ ಎಂದು ಗೊತ್ತಾಗಿದೆ. ಸ್ಥಳೀಯರು ಮತ್ತು ಸ್ನೇಹಿತರ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮಂಜುನಾಥನ ಮೇಲೆ ಅನುಮಾನ ಮೂಡಿದೆ. ಚೌಕ್ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ಕೈಗೊಂಡಿದ್ದರು. ಬುಧವಾರ ಸಂಜೆಯೇ ಮಂಜುನಾಥನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ಸಂದರ್ಭದಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಮೇಲೆ ಕೊಲೆ ಆರೋಪಿ ಹಲ್ಲೆ: ಬಂಧಿತ ಮಂಜುನಾಥನನ್ನು ಗುರುವಾರ ಮಧ್ಯಾಹ್ನ ಸ್ಥಳ ಮಹಜರು ಮಾಡುವುದಕ್ಕೆ ಆಳಂದ ಚೆಕ್‌ಪೊಸ್ಟ್ ಹತ್ತಿರದ ಯುನಾನಿ ಆಸ್ಪತ್ರೆ ಬಳಿ ಕರೆದುಕೊಂಡು ಹೋಗಲಾಗಿತ್ತು. ಸ್ಥಳ ಮಹಜರು ಮಾಡುವಾಗ ಮಂಜುನಾಥ ಏಕಾಏಕಿ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಚೌಕ್ ಠಾಣೆಯ ಪಿಐ ರಾಜಶೇಖರ ಹಳಿಗೋಧಿ ಒಂದು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಈ ವೇಳೆ ಆರೋಪಿ ಮಂಜುನಾಥನನ್ನು ಸೆರೆ ಹಿಡಿಯಲು ಮುಂದಾದ ಕಾನ್ಸ್‌ಟೇಬಲ್ ಸ್ವಾಮಿ ಮೇಲೆ ಚಾಕುವಿನಿಂದ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ನಂತರ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಶಾಲೆಗೆ ಹೊರಟ ಬಾಲಕ ಬೆಳಗ್ಗೆ ಅಪಹರಣ, ಸಂಜೆಯೊಳಗೆ ಪೊಲೀಸರಿಂದ ರಕ್ಷಣೆ.. ಹೇಗಿತ್ತು ಗೊತ್ತಾ ಖಾಕಿ ಪಡೆ ಕಾರ್ಯಾಚರಣೆ!?