ಕಲಬುರಗಿ:ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಕ್ರಮಬದ್ಧವಾದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಬಹುತೇಕರು ಬಹುಕೋಟಿ ಒಡೆಯರಾಗಿದ್ದಾರೆ. ಯಾರೆಲ್ಲಾ ರಾಜಕೀಯ ನಾಯಕರು ಎಷ್ಟು ಆಸ್ತಿ ಹೊಂದಿದ್ದಾರೆ ಅನ್ನೋದನ್ನು ತಿಳಿಯಲು ಈ ಸ್ಟೋರಿ ಓದಿ.
ಸ್ವಂತ ವಾಹನಗಳು ಇಲ್ಲ:ಆಳಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಪಾಟೀಲ್ ತಮ್ಮ ಪತ್ನಿಗಿಂತ ಕಡಿಮೆ ಆಸ್ತಿ ಹೊಂದಿದ್ದಾರೆ. ಪತಿ- ಪತ್ನಿ ಇಬ್ಬರ ಬಳಿಯೂ ಸ್ವಂತ ವಾಹನಗಳು ಇಲ್ಲ. ಪಾಟೀಲ್ ಅವರ ಹೆಸರಿನಲ್ಲಿ ₹1.90 ಕೋಟಿ ಆಸ್ತಿ ಇದೆ. ಇದರಲ್ಲಿ ಚರಾಸ್ತಿ- 1ಕೋಟಿ, ಸ್ಥಿರಾಸ್ತಿ- 90 ಲಕ್ಷ ಮೌಲ್ಯದ್ದಿದೆ. ಕೈಯಲ್ಲಿ 2.30 ಲಕ್ಷ ಹಣ, 64 ಲಕ್ಷ ಮೌಲ್ಯದ 1120 ತೊಲೆ ಚಿನ್ನ, 4 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ, ಕಲಬುರಗಿಯಲ್ಲಿ ಮನೆ ಹೊಂದಿದ್ದಾರೆ. ಮನೆ ಕಟ್ಟಡಕ್ಕೆ 44 ಲಕ್ಷ ಹೌಸಿಂಗ್ ಲೋನ್, 4 ಲಕ್ಷ ಕೈಸಾಲ ಪಡೆದಿದ್ದಾರೆ. ಇವರ ಪತ್ನಿ ಭಾರತಿ ಪಾಟೀಲ್ ಚರಾಸ್ತಿ-27 ಲಕ್ಷ, ಸ್ಥಿರಾಸ್ತಿ-2 ಕೋಟಿ ಸೇರಿ ಒಟ್ಟು ₹2.27 ಕೋಟಿ ಆಸ್ತಿ ಹೊಂದಿದ್ದಾರೆ.
ಸುಭಾಷ ಗುತ್ತೇದಾರಗೆ 3 ಕೋಟಿ ಸಾಲ:ಆಳಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಒಟ್ಟು ಆಸ್ತಿ- ₹2.47 ಕೋಟಿ, ಚರಾಸ್ತಿ- 1.86 ಕೋಟಿ, ಸ್ಥಿರಾಸ್ತಿ- 61 ಲಕ್ಷ, ಇವರಿಗೆ 3 ಕೋಟಿ ಸಾಲ ಇದೆ. 1 ಇನೋವಾ ಕಾರ್, 1 ಫೋರ್ಡ್ ಕಾರ್, ಚಿನ್ನಾಭರಣ- 250 ಗ್ರಾಂ. ಕೃಷಿ ಭೂಮಿ- 48 ಎಕರೆ ಕೃಷಿಯೇತರ ಭೂಮಿ- 5 ಎಕರೆ, ಕಲಬುರಗಿಯಲ್ಲಿ ಎರಡು ಮನೆಗಳು, ತಡಕಲ್ ಗ್ರಾಮದಲ್ಲಿ ಒಂದು ಮನೆ ಹೊಂದಿದ್ದಾರೆ. ಪತ್ನಿ ಸರೋಜಾ ಗುತ್ತೇದಾರ್ ಹೆಸರಿನಲ್ಲಿ ಒಟ್ಟು ಆಸ್ತಿ- ₹ 87 ಲಕ್ಷ ಆಸ್ತಿ ಹೊಂದಿದ್ದಾರೆ.
ಮಾಜಿ ಸಚಿವರ ಪತ್ನಿ ಹೆಸರಲ್ಲಿ 18 ಕೋಟಿ ಆಸ್ತಿ:ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಅವರ ಧರ್ಮಪತ್ನಿ ಕನೀಜ್ ಫಾತಿಮಾ ಒಟ್ಟು ₹ 18.44 ಕೋಟಿ ಆಸ್ತಿ ಹೊಂದಿದ್ದಾರೆ. ಚರಾಸ್ತಿ- 3.79 ಕೋಟಿ, ಸ್ಥಿರಾಸ್ತಿ- 14.65 ಕೋಟಿ, ಸಾಲ- 8.53 ಲಕ್ಷ ಕಾರ್ ಲೋನ್ ಇದೆ. 1 ಇನೋವಾ ಕ್ರಿಸ್ಟಾ, 1 ಫಾರ್ಚುನರ್, ₹2.77 ಕೋಟಿ ಮೌಲ್ಯದ ಡೈಮಂಡ್, ಚಿನ್ನ, ಬೆಳ್ಳಿ, ಕಲಬುರಗಿ ವಿವಿಧಡೆ 4 ಕಮರ್ಷಿಯಲ್ ಬಿಲ್ಡಿಂಗ್, ಒಂದು ಮನೆ, ಬೆಂಗಳೂರಿನಲ್ಲಿ 1 ಕಮರ್ಷಿಯಲ್ ಬಿಲ್ಡಿಂಗ್ ಹೊಂದಿದ್ದಾರೆ.
ಕುಟುಂಬಸ್ಥರ ಆಸ್ತಿಯ ಮೌಲ್ಯ 12.56 ಕೋಟಿ:ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ್ ಪಾಟೀಲ್ (ಚಂದು ಪಾಟೀಲ್) ದಂಪತಿ ಇಬ್ಬರ ಮಕ್ಕಳ ಹೆಸರಿನಲ್ಲಿ ಆಸ್ತಿ ಹೊಂದಿದ್ದಾರೆ. ಚಂದು ಪಾಟೀಲ್ ಅವರ ಹೆಸರಿನಲ್ಲಿ ₹9.36 ಕೋಟಿ ಆಸ್ತಿ ಇದೆ. ಚರಾಸ್ತಿ - 8.10 ಕೋಟಿ, ಸ್ಥಿರಾಸ್ತಿ - 1.26 ಕೋಟಿ, 1 ಕ್ರೇಟಾ ಕಾರ್, ಚಿನ್ನ - 90 ತೊಲೆ, ಬೆಳ್ಳಿ - 47 ಕೆಜಿ, ಷೇರುಗಳು & ಮ್ಯೂಚುಯಲ್ ಫಂಡ್ - 6.16 ಕೋಟಿ, ನ್ಯಾಷನಲ್ ಶೇವಿಂಗ್ಸ್ ಇನ್ವೆಸ್ಟ್ಮೆಂಟ್- 1.10 ಕೋಟಿ, ಜಮೀನು- 2 ಎಕರೆ, ಸುಪರ್ ಮಾರುಕಟ್ಟೆಯಲ್ಲಿ ಕಮರ್ಸಿಯಲ್ ಬಿಲ್ಡಿಂಗ್ ಇದೆ. ಇವರ ಪತ್ನಿ ಪ್ರೀಯಾಂಕಾ ಪಾಟೀಲ್ ಆಸ್ತಿ -₹ 1.04 ಕೋಟಿ ಮೌಲ್ಯದಿದೆ. ಚಿನ್ನ- 35 ತೊಲೆ, ಬೆಳ್ಳಿ- 30 ಕೆಜಿ, ಷೇರುಗಳು ಮತ್ತು ಮ್ಯೂಚುಯಲ್ ಫಂಡ್-10 ಲಕ್ಷ ನ್ಯಾಷನಲ್ ಶೇವಿಂಗ್ಸ್ ಇನ್ವೆಸ್ಟ್ಮೆಂಟ್- 50 ಲಕ್ಷ ಹೊಂದಿದ್ದಾರೆ. ಪುತ್ರ ಶಿವ ಸಿ. ಪಾಟೀಲ್ ಹೆಸರಿನಲ್ಲಿ ₹1.08 ಕೋಟಿ, ಇನ್ನೊರ್ವ ಪುತ್ರ ಹ್ರೀಧನ್ ಸಿ. ಪಾಟೀಲ್ ಹೆಸರಿನಲ್ಲಿ ₹1.08 ಕೋಟಿ ಆಸ್ತಿ ಇದೆ.
ಮಾಲೀಕಯ್ಯ ಅವರಿಗಿಂತ ಪತ್ನಿ ಮೂರುಪಟ್ಟು ಶ್ರೀಮಂತೆ:ಅಫಜಲಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ 1.26 ಕೋಟಿ ಒಡೆಯರಾಗಿದ್ದು, ಇವರ ಪತ್ನಿ ವನಿತಾ ಗುತ್ತೇದಾರ ಇವರಿಗಿಂತ ಮೂರರಷ್ಟು ಶ್ರೀಮಂತರಿದ್ದಾರೆ. ಮಾಲೀಕಯ್ಯ ಗುತ್ತೇದಾರ 55.81 ಲಕ್ಷ ಚರಾಸ್ತಿ, 70.20 ಲಕ್ಷ ಸ್ಥಿರಾಸ್ತಿ ಸೇರಿ ಒಟ್ಟು 1.26 ಕೋಟಿ ಆಸ್ತಿ ಇದೆ. ಗುತ್ತೇದಾರ ಹೆಸರಿನಲ್ಲಿ ವಾಹನಗಳಿಲ್ಲ, ಚಿನ್ಮಾಭರಣ ಇಲ್ಲ, 82 ಎಕರೆ ಜಮೀನು, ಬೆಂಗಳೂರು, ಸಿರಾದಲ್ಲಿ ನಿವೇಶನ, 20.68 ಲಕ್ಷ ಸಾಲ ಹೊಂದಿದ್ದಾರೆ. ಪತ್ನಿ ವನಿತಾ ಗುತ್ತೇದಾರ 1.58 ಕೋಟಿ ಚರಾಸ್ತಿ, 1.73 ಕೋಟಿ ಸ್ಥಿರಾಸ್ತಿ ಸೇರಿ 3.31 ಕೋಟಿ ಮೌಲ್ಯದ ಆಸ್ತಿ ಇದೆ.
ಎಂ.ವೈ. ಪಾಟೀಲ್ ಆಸ್ತಿ ಎಷ್ಟು?:ಅಫಜಲಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ. ಪಾಟೀಲ್ ಚರಾಸ್ತಿಗಿಂತ ಸ್ಥಿರಾಸ್ತಿಯಲ್ಲಿ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಅನ್ನೋದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಿಂದ ಗೊತ್ತಾಗಿದೆ. 82 ವರ್ಷದ ಎಂ.ವೈ. ಪಾಟೀಲ್ ತಮ್ಮ ಹೆಸರಿನಲ್ಲಿ 3.86 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ಕೇವಲ 13.97 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 5 ಕೆ.ಜಿ ಬೆಳ್ಳಿ, 120 ಗ್ರಾಂ ಚಿನ್ನಾಭರಣ, ಅಫಜಲಪುರ ತಾಲೂಕಿನ ಕಲ್ಲೂರನಲ್ಲಿ 73 ಎಕರೆ ಜಮೀನು, ಒಂದು ಮನೆ, ಕಲಬುರಗಿಯ ಸೀತನೂರ ಗ್ರಾಮದಲ್ಲಿ 38 ಎಕರೆ ಜಮೀನು, ಕಲಬುರಗಿಯಲ್ಲಿ ಒಂದು ಮನೆ ಇದೆ.
ಮಹಾರಾಷ್ಟ್ರ, ತೆಲಂಗಾಣದಲ್ಲಿ ಆಸ್ತಿ:ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ 29 ಕೋಟಿ 17 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ. ಚರಾಸ್ತಿ- 11.34 ಕೋಟಿ, ಸ್ಥಿರಾಸ್ತಿ-17.83 ಕೋಟಿ ಇದೆ. 408 ತೊಲೆ ಚಿನ್ನ, ಅರ್ಧ ಕೆಜಿ ಬೆಳ್ಳಿ, ರೇಂಜ್ ರೋವರ್, ಫಾರ್ಚುನರ್, ವೋಲ್ವೋ ಎಕ್ಸ್ ಸಿ, ಬೆಂಜ್ ನಂತಹ ಐಷಾರಾಮಿ ಕಾರುಗಳು, ಟ್ರಕ್, ಟ್ರ್ಯಾಕ್ಟರ್ ಸೇರಿದಂತೆ ಒಟ್ಟು 12 ವಾಹನಗಳು ಇವೆ. ಗುರುಮಿಠಕಲ್, ಮಾಲಗತ್ತಿ, ಭಾಗೋಡಿ ಗ್ರಾಮದಲ್ಲಿ 19 ಎಕರೆ ಕೃಷಿ ಭೂಮಿ ಇದೆ. ಮಹಾರಾಷ್ಟ್ರದ ಕಲ್ಯಾಣದಲ್ಲಿ ವಾಣಿಜ್ಯ ಕಟ್ಟಡ, ಹೈದರಾಬಾದ್, ಕಲಬುರಗಿ, ಗುರುಮಿಠಲ್ನಲ್ಲಿ ವಸತಿ ಕಟ್ಟಡ ಹೊಂದಿದ್ದಾರೆ. ಇವರ ಧರ್ಮಪತ್ನಿ ಭಾರತಿ ರಾಠೋಡ 16.70 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಪ್ರಿಯಾಂಕ್ ಖರ್ಗೆ 14.49 ಕೋಟಿ ಒಡೆಯ:ಚಿತ್ತಾಪುರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ 14.49 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಚರಾಸ್ತಿ- 4.20 ಕೋಟಿ, ಸ್ಥಿರಾಸ್ತಿ- 10.29 ಕೋಟಿ ಸಾಲ- 28.75 ಲಕ್ಷ ಇದೆ. 650 ತೊಲೆ ಚಿನ್ನ, 2 ಕೆಜಿ ಬೆಳ್ಳಿ, 29.52 ಲಕ್ಷದ ಹೋಂಡಾ ಸಿಆರ್ವಿ ಕಾರು, 68.25 ಲಕ್ಷ ಮೌಲ್ಯದ ಷೇರುಗಳು, ವಿವಿಧ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ಬಾಂಡ್ಸ್, ಬೆಂಗಳೂರಿನಲ್ಲಿ ಕಮರ್ಷಿಯಲ್ ಬಿಲ್ಡಿಂಗ್, ಬೆಂಗಳೂರಿನಲ್ಲಿ ವಸತಿ ಮನೆ, ಗುಂಡಗುರ್ತಿಯಲ್ಲಿ 46.28 ಎಕರೆ ಕೃಷಿ ಜಮೀನು, ಬೆಂಗಳೂರಿನಲ್ಲಿ 2700 ಸ್ಕ್ವೇರ್ ಫೀಟ್ ಕೃಷಿಯೇತರ ಭೂಮಿ, ಕಲಬುರಗಿಯ ಬಡೇಪುರ್ ಕಾಲೋನಿಯಲ್ಲಿ ನಾಲ್ಕು ಸಾವಿರ ಸ್ಕ್ವೇರ್ ಫೀಟ್ ಕೃಷಿಯೇತರ ಭೂಮಿ ಇದೆ. ಇವರ ಪತ್ನಿ ಶೃತಿ ಪಿ. ಖರ್ಗೆ 1.06 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಚರಾಸ್ತಿ- 72.38 ಲಕ್ಷ, ಸ್ಥಿರಾಸ್ತಿ- 33.75 ಲಕ್ಷ, 15 ಲಕ್ಷ ಮೌಲ್ಯದ ಶೇರ್‌ಗಳು, 900 ತೊಲೆ ಚಿನ್ನ, 5 ಕೆ.ಜಿ. ಬೆಳ್ಳಿ, ತಾಯಿಯಿಂದ ಬಳುವಳಿಯಾಗಿ ಬೆಂಗಳೂರಿನಲ್ಲಿ 1350 ಸ್ಕ್ವೇರ್ ಫೀಟ್ ನಿವೇಶನ ಇದೆ. ಪುತ್ರ ಅಮೀತಾಬ ಪಿ. ಖರ್ಗೆ 25.39 ಲಕ್ಷ ಹಾಗೂ ಆಕಾಂಕ್ಷ ಪಿ. ಖರ್ಗೆ 4.52 ಲಕ್ಷ ಚರಸ್ತಿ ಹೊಂದಿದ್ದಾರೆ.
ಅಲ್ಲಮಪ್ರಭು ಪಾಟೀಲ್ 1.07 ಕೋಟಿ ಸಾಲಗಾರ:ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ದಂಪತಿ ಸ್ಥಿರಾಸ್ತಿ ಒಟ್ಟು ಮೌಲ್ಯ 5. 41 ಕೋಟಿ ಇದೆ. ಜೇವರ್ಗಿ, ಕಲಬುರಗಿ, ಬೆಂಗಳೂರು, ಹಳ್ಳಿಸಲಗರ, ಸಿರನೂರ್ ಸೇರಿದಂತೆ ಹಲವೆಡೆ ಕೃಷಿ, ಕೃಷಿಯೇತರ ಭೂಮಿಗಳು ಇವೆ. ಅಲ್ಲಮಪ್ರಭು ಪಾಟೀಲ್ ಅವರ ಹೆಸರಲ್ಲಿ ವಿವಿಧ ಬ್ಯಾಂಕ್ ಹಣಕಾಸು ಸಂಸ್ಥೆಗಳಲ್ಲಿ ಹಲವು ಸ್ವರೂಪದಲ್ಲಿ 1.07 ಕೋಟಿ ರೂ. ಸಾಲದ ಹೊರೆ ಇದೆ.
ಶಾಸಕ ರಾಜಕುಮಾರ್ ಕೋಟಿ ಒಡೆಯ:ಸೇಡಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ಒಟು ಕುಟುಂಬದ ಆಸ್ತಿ 33 ಕೋಟಿ ಇದೆ. ತೇಲ್ಕೂರ್ ಬಳಿ 1.3 ಕೋಟಿ, ಪತ್ನಿ ಸಂತೋಷಿ ರಾಣಿ ಬಳಿ 20 ಕೋಟಿ ಮೌಲ್ಯದ ಆಸ್ತಿ ಇದೆ. ತೇಲ್ಕೂರ್ ಹೆಸರಲ್ಲಿ ಯಾವುದೇ ವಾಹನಗಳಿಲ್ಲ. ಆದರೆ, ಪತ್ನಿ ಸಂತೋಷಿ ರಾಣಿಯವರ ಹೆಸರಲ್ಲಿ 2.93 ಕೋಟಿ ಮೌಲ್ಯದ ಮಹೀಂದ್ರಾ ಕಾರು, ಮಹಾರಾಷ್ಟ್ರ ಪಾಸಿಂಗ್ ಟ್ರಕ್‌ಗಳಿವೆ. ಜೆಇಪಿಎಲ್ ಕಾಪಿಟಲ್, ಶುಭಂ ಇಕ್ವಿಟರ್‌ನಲ್ಲಿ ತೇಲ್ಕೂರ್ ಅವರು ತಲಾ 73 ಲಕ್ಷ ಹಾಗೂ 51 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. 11.34 ಲಕ್ಷ ಮೌಲ್ಯದ ಚಿನ್ನಾಭರಣ, ಸೇಡಂ, ಹಾಬಾಳ ಹಾಗೂ ಸಿರೋಳ್ಳಿಯಲ್ಲಿ ಕೃಷಿ ಭೂಮಿ, ಪತ್ನಿ ಹೆಸರಲ್ಲಿ 8 ಎಕರೆ ಕೃಷಿ ಭೂಮಿ ಇದೆ.
ಅಜಯ್ ಸಿಂಗ್ ಮನೆ 15.66 ಕೋಟಿ ಮೌಲ್ಯದ್ದು:ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಧರಂಸಿಂಗ್ ಪುತ್ರ ಡಾ.ಅಜಯ್‌ಸಿಂಗ್ ಕೈಯಲ್ಲಿ 75 ಲಕ್ಷ ರೂ. ನಗದು, ಪತ್ನಿ ಶ್ವೇತಾ ಸಿಂಗ್ ಬಳಿ 2.14 ಲಕ್ಷ ರೂ. ನಗದು ಇದೆ. ತಮ್ಮ ಬಳಿ 20.22 ಕೋಟಿ, ಪತ್ನಿ ಹೆಸರಲ್ಲಿ 9.93 ಕೋಟಿಯಷ್ಟು ಚರಾಸ್ಥಿ ಹೊಂದಿದ್ದಾರೆ. ಮಕ್ಕಳಾದ ಶೈನಾ, ಅರ್ಹನ್ ಜಯ್ ಸಿಂಗ್ ಕ್ರಮವಾಗಿ 1.28 ಕೋಟಿ ರೂ., 1.23 ಕೋಟಿ ರೂ. ನಷ್ಟು ಚರಾಸ್ತಿ ಇದೆ. 1.77 ಕೆಜಿ ಚಿನ್ನ, 1.55 ಕ್ಯಾರೆಟ್ ವಜ್ರ, ನವರತ್ನ, 10.75 ಕೆಜಿ ರಜತ ಸೇರಿದಂತೆ 1.17 ಕೋಟಿ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಪತ್ನಿ ಶ್ವೇತಾ ಬಳಿ 3.45 ಕೆಜಿ ಚಿನ್ನ, 82 ಅಮೂಲ್ಯ ವಜ್ರಗಳು, 11.50 ಕೆಜಿ ಬೆಳ್ಳಿ ಸೇರಿದಂತೆ 2.22 ಕೋಟಿಯಷ್ಟು ಮೌಲ್ಯದ ಚಿನ್ನಾಭರಣ, ವಜ್ರಗಳಿವೆ. ಕಲಬುರಗಿ ವಿವಿಧೆಡೆ ಕೃಷಿ ಭೂಮಿ, 2.13, ಕೃಷಿಯೇತರ ಭೂಮಿ, ಪತ್ನಿ ಹೆಸರಲ್ಲಿ ಕೃಷಿಯೇತರ ಭೂಮಿ ಇದೆ. ಅಜಯ್‌ಸಿಂಗ್ ಹೆಸರಲ್ಲಿ ವಾಣಿಜ್ಯ ಕಟ್ಟಡ, 15.66 ಕೋಟಿ ಬೆಲೆಬಾಳುವ ವಾಸದ ಮನೆ, ಪತ್ನಿ ಹೆಸರಲ್ಲಿ ಬೆಂಗಳೂರಿನ ವಿವಿಧೆಡೆ 6.58 ಕೋಟಿಯ ಮೌಲ್ಯದ ಮನೆಗಳು ಸೇರಿದಂತೆ ಈ ದಂಪತಿಯ ಸ್ಥಿರಾಸ್ತಿ ಮೌಲ್ಯ ಕ್ರಮವಾಗಿ 28.15 ಹಾಗೂ 6.32 ಕೋಟಿ ಮೌಲ್ಯದ್ದಿದೆ.
ಇದನ್ನೂ ಓದಿ:ಸಚಿವ ಆನಂದ್ ಸಿಂಗ್ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ