ಕಲಬುರಗಿ:ಚಿತ್ತಾಪುರ ತಾಲೂಕಿನ ಕುಂದನೂರ ಗ್ರಾಮದ ಭೀಮಾನದಿಯಲ್ಲಿ ಮೀನುಗಳ ಮಾರಣಹೋಮವೇ ಆಗಿದೆ. ಈ ನದಿ ನೀರು ಸಮೀಪದ ವಾಡಿ ಪಟ್ಟಣಕ್ಕೆ ಕುಡಿಯಲು ಪೂರೈಕೆಯಾಗುತ್ತದೆ. ನದಿಯಲ್ಲಿ ಮೀನುಗಳು ಸಾವನ್ನಪ್ಪಿದರಿಂದ ಜೀವಜಲ ಕಲುಷಿತವಾಗಿದೆ. ಅಷ್ಟೇ ಅಲ್ಲದೆ, ಜನತೆಯಲ್ಲಿ ರೋಗ ಭೀತಿಯ ಆತಂಕ ನಿರ್ಮಾಣವಾಗಿದೆ.
ಕಲಬುರಗಿಯ ಭೀಮಾನದಿಯಲ್ಲಿ ಮೀನುಗಳ ಮಾರಣಹೋಮ
ಚಿತ್ತಾಪುರ ತಾಲೂಕಿನ ಕುಂದನೂರ ಗ್ರಾಮದ ಭೀಮಾ ನದಿಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಬಿಸಿಲಿನ ಧಗೆಯಿಂದ ನೀರಿನೊಳಗೆ ಆಮ್ಲಜನಕ ಕೊರತೆ ಉಂಟಾಗಿ ಮೀನುಗಳು ಉಸಿರುಗಟ್ಟಿ ಸಾವನ್ನಪ್ಪಿವೆ ಎಂಬ ಶಂಕೆ ವ್ಯಕ್ತವಾಗಿದೆ.
ಸನ್ನತ್ತಿ ಭೀಮಾ ಬ್ಯಾರೇಜ್ ಗೇಟ್ ಹಾಕಿದ್ದರಿಂದ ಹಿನ್ನೀರು ಕುಂದನೂರವರೆಗೂ ಬಂದಿದೆ. ಪರಿಣಾಮ ಕಳೆದ ವರ್ಷಕ್ಕಿಂತ ಈ ಬಾರಿ ಬೇಸಿಗೆಯಲ್ಲೂ ಭೀಮಾನದಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದ್ದು, ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ. ಆದರೆ ಏಕಾಏಕಿ ನದಿಯೊಳಗೆ ಸಾವಿರಾರು ಮೀನುಗಳು ಮೃತಪಟ್ಟಿವೆ. ಬಿಸಿಲಿನ ಬೇಗೆಯಿಂದ ನೀರಿನಲ್ಲಿ ಆಮ್ಲಜನಕ ಕೊರೆತೆಯಾಗಿ ಅವುಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ. ಹೀಗೆ ಮೃತಪಟ್ಟ ಮೀನಿನ ರಾಶಿಯೇ ನದಿಪಾತ್ರದಲ್ಲಿ ತೇಲುತ್ತಿದೆ.
ಸ್ಥಳೀಯ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.ಅಧಿಕಾರಿಗಳು ಜಲ ಮೂಲದತ್ತ ಗಮನ ಹರಿಸುವಂತೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವಾಡಿ ಪಟ್ಟಣಕ್ಕೆ ಪೂರೈಕೆಯಾಗುವ ಜಲಮೂಲದಲ್ಲಿ ಈ ರೀತಿ ನಡೆದಿರುವುದು ಸಾಂಕ್ರಾಮಿಕ ರೋಗದ ಭೀತಿ ಉಂಟು ಮಾಡಿದೆ.