ಕಲಬುರಗಿ: ಸುಪ್ರಸಿದ್ಧ ಘತ್ತರಗಿ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದಾರೆ. ಲಕ್ಷಾಂತರ ಮೌಲ್ಯದ ಆಭರಣ, ನಗದು ಕಳುವಾಗಿದೆ. ಮಧ್ಯರಾತ್ರಿ ಮಂಕಿ ಕ್ಯಾಪ್ ಧರಿಸಿ ಬಂದ ಮೂವರು ಗರ್ಭಗುಡಿಯ ಎರಡನೇ ಬಾಗಿಲಿನಿಂದ ಒಳನುಗ್ಗಿ ದೇವರ ಮೈಮೇಲಿನ ಚಿನ್ನ, ಬೆಳ್ಳಿಯ ಆಭರಣಗಳು ಸೇರಿದಂತೆ ಹುಂಡಿಯಲ್ಲಿದ್ದ ಹಣ ಹೊತ್ತೊಯ್ದಿದ್ದಾರೆ. ಚಿಲ್ಲರೆ ನಾಣ್ಯಗಳ ಭಾರ ಹೊರಲಾಗದೆ ಕರಿ ಮಲ್ಲಪ್ಪನ ದೇವಸ್ಥಾನದ ಹತ್ತಿರದ ತಿಪ್ಪೆಗೆ ಎಸೆದಿದ್ದಾರೆ.
ಬೆಳಗಿನ ಜಾವ ಪೂಜೆಗೆಂದು ಅರ್ಚಕರು ದೇವಸ್ಥಾನ ಗರ್ಭಗುಡಿ ಪ್ರವೇಶ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟಿರುವ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಸಿಸಿ ಕ್ಯಾಮರಾಗಳಿದ್ದು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೀಗಿದ್ದರೂ ಖದೀಮರು ಕೇವಲ 16 ನಿಮಿಷಗಳಲ್ಲಿ ಕೃತ್ಯ ಎಸಗಿದ್ದಾರೆ.