ಕಲಬುರಗಿ:ಸಾಮಾಜಿಕ ಜಾಲಾತಾಣವನ್ನು ಬಳಿಸಿಕೊಂಡು ಇಲ್ಲೋರ್ವ ಯುವ ರೈತ ತಾನು ಬೆಳೆದ ಹಳದಿ ಕಲ್ಲಂಗಡಿಯನ್ನು ಮಾರಾಟ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ.
ಲಾಕ್ಡೌನ್ನಲ್ಲೂ ಹಳದಿ ಕಲ್ಲಂಗಡಿ ಮಾರಿ ಲಾಭ ಗಳಿಸಿದ ಮಾದರಿ ಯುವ ರೈತ ಬಸವರಾಜ್ ಪಾಟೀಲ್ ಕೊರಳಿ ಎಂಬ ಯುವ ರೈತ ತಾನು ಬೆಳೆದ ಹಳದಿ ಕಲ್ಲಂಗಡಿ ಹಣ್ಣು ಮಾರಾಟಕ್ಕೆ ಹೂಸ ವೇದಿಕೆ ರೂಪಿಸಿಕೊಂಡಿದ್ದಾನೆ. ಮೂಲತಃ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳಿ ಗ್ರಾಮದವರಾದ ಬಸವರಾಜ್, ಕಳೆದ ನಾಲ್ಕೈದು ತಿಂಗಳ ಹಿಂದೆ ತಮ್ಮದೇ ನಾಲ್ಕು ಎಕರೆ ಜಮೀನಿನಲ್ಲಿ ಜರ್ಮನ್ ತಳಿಯ ಹಳದಿ ಕಲ್ಲಂಗಡಿ ಹಣ್ಣನ್ನ ಬೆಳೆದಿದ್ದರು.
ನಾಲ್ಕು ಲಕ್ಷ ರೂಪಾಯಿ ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದ ಮೇಲೆ ಎರಡನೇ ಕೊರೊನಾ ಅಲೇ ಶುರುವಾಗಿ, ಸರ್ಕಾರವು ಲಾಕ್‌ಡೌನ್ ವಿಧಿಸಿತ್ತು. ಇದರಿಂದ ಎಲ್ಲಾ ಹಣ್ಣು, ತರಕಾರಿ ಮಾರುಕಟ್ಟೆಗಳು ಬಂದ್ ಆದ ಕಾರಣ, ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಕಲ್ಲಂಗಡಿ ಹಣ್ಣನ್ನ ಹೇಗಪ್ಪ ಮಾರಾಟ ಮಾಡೋದು ಅಂತಾ ತಲೆ ಮೇಲೆ ಕೈಯಿಟ್ಟುಕೊಂಡು ಕುಳಿತಿದ್ದರು. ಆಗ ಯುವ ರೈತನ ತಲೆಯಲ್ಲಿ ಹೊಳೆದಿದ್ದು ಸಾಮಾಜಿಕ ಜಾಲತಾಣ.
ಹಳದಿ ಕಲ್ಲಂಗಡಿ ಹಣ್ಣು ಬೇರೆ ಕಡೆಗೆ ಸಿಗೋದು ವಿರಳ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್ ಗ್ರೂಪ್ ಸೇರಿದಂತೆ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಳದಿ ಕಲ್ಲಂಗಡಿ ಹಣ್ಣಿನ ಬಗ್ಗೆ ಭರ್ಜರಿ ಪ್ರಚಾರ ಕೈಗೊಂಡರು. ಅದರಂತೆ ನಿನ್ನೆಯಿಂದ ಎರಡು ಟಂಟಂ ವಾಹನಗಳಲ್ಲಿ ಹಳದಿ ಕಲ್ಲಂಗಡಿ ತಂದು ಕಲಬುರಗಿ ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದಾರೆ. ಒಂದು ಹಳದಿ ಕಲ್ಲಂಗಡಿಗೆ ಐವತ್ತು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ನಿನ್ನೆಯಿಂದ ಒಟ್ಟು ಎರಡು ಸಾವಿರಕ್ಕೂ ಅಧಿಕ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ.
ಅಂದಹಾಗೇ ಕಲಬುರಗಿ ಜಿಲ್ಲೆಯಲ್ಲಿ ನೂರಾರು ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನ ಬೆಳೆದಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಲ್ಲಂಗಡಿ ಹಣ್ಣು ಮಾರಾಟವಾಗದ ಕಾರಣ ಬೇಸತ್ತು ಟ್ರ್ಯಾಕ್ಟರ್‌ನಿಂದ ಕಲ್ಲಂಗಡಿ ಬೆಳೆ ನಾಶ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಮಗೆ ಪರಿಹಾರ ಬೇಕೆಂದು ಪ್ರತಿಭಟನೆ ಮಾಡುತ್ತಿರುವ ವಿಚಾರ ಸಾಮಾನ್ಯವಾಗಿದೆ. ಆದರೆ ಈ ಯುವ ಮಾದರಿ ರೈತ ಬಸವರಾಜ್ ಮಾತ್ರ, ಸಾಮಾಜಿಕ ಜಾಲತಾಣದಲ್ಲಿ ತಾನು ಬೆಳೆದ ಹಳದಿ ಕಲ್ಲಂಗಡಿ ಬಗ್ಗೆ ಪ್ರಚಾರ ಮಾಡಿ ಸಾರ್ವಜನಿಕರ ಗಮನ ಸೆಳೆದಿದ್ದಾನೆ.
ಹಳದಿ ಕಲ್ಲಂಗಡಿ ಸೇವನೆಯಿಂದಾಗುವ ಉಪಯೋಗಗಳು:
ಕಣ್ಣಿನ ದೃಷ್ಟಿಯನ್ನ ಹೆಚ್ಚಿಸುವುದು, ಹೃದಯ ಸಂಬಂಧಿ ಕಾಯಿಲೆಗಳನ್ನ ದೂರ ಮಾಡುವುದು, ಜೀರ್ಣಕ್ರಿಯೆ ವೃದ್ದಿಸುವುದು, ಕ್ಯಾನ್ಸರ್ ತಡೆಗಟ್ಟುವುದು, ಚರ್ಮ ಸೌಂದರ್ಯ ಹೆಚ್ಚಿಸುವುದು ಸೇರಿದಂತೆ ಆರೋಗ್ಯಕ್ಕೆ ಸಹಕಾರಿಯಾದ ಅಂಶಗಳನ್ನ ಹಳದಿ ಕಲ್ಲಂಗಡಿ ಹಣ್ಣು ಒಳಗೊಂಡಿದೆ.
ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಲಕ್ಷಾಂತರ ರೈತರು ತಾವು ಬೆಳೆದ ಬೆಳೆಗಳನ್ನ ಮಾರಾಟ ಮಾಡಲು ಆಗದೇ ತೀವ್ರ ಆರ್ಥಿಕ ಸಂಕಷ್ಟಕ್ಕಿಡಾದ ಅನೇಕ ಉದಾಹರಣೆಗಳು ದಿನನಿತ್ಯ ಕಾಣ ಸಿಗುತ್ತಿವೆ. ಆದರೆ, ಬಸವರಾಜ್ ತಾನು ಹಾಕಿದ ಬಂಡವಾಳಕ್ಕೆ ಹಣ ಬರದಿದ್ದರು ಸಹ, ಬಂಡವಾಳ ಹಣ ಮಾತ್ರ ಈ ರೈತ ಪಡೆಯುತ್ತಿರುವುದು ಎಲ್ಲರ ಹುಬ್ಬೆರಿಸುವಂತೆ ಮಾಡಿದಲ್ಲದೆ. ಲಾಕ್‌ಡೌನ್ ಸಂದರ್ಭದಲ್ಲಿ ಸಹ ಕಲ್ಲಂಗಡಿ ಹಣ್ಣು ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಲಾಭ ಪಡೆಯುತ್ತಿರುವ ರೈತ ಬಸವರಾಜ್ ಕಾರ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.