ಕಲಬುರಗಿ: ಆಧುನಿಕ ಯುಗದ ತಂತ್ರಜ್ಞಾನದ ಪ್ರಭಾವದಿಂದಾಗಿ ಯುವಜನಾಂಗವೆಲ್ಲ ಮೊಬೈಲ್ನಲ್ಲಿ ಮುಳುಗಿ ಸಾಂಪ್ರದಾಯಿಕ ಓದಿಗೆ ಗುಡ್ಬಾಯ್ ಹೇಳಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೇ ಲೈಬ್ರರಿಗಳು ಕಣ್ಮರೆಯಾಗುತ್ತಿರುವುದು ಇಂದಿನ ಯುವಜನಾಂಗದ ಓದಿನ ಅಧಃಪತನದ ಹಾದಿಯ ಬಿಂಬವಾಗಿ ಕಂಡುಬರುತ್ತದೆ. ಇಷ್ಟೇ ಅಲ್ಲದೇ ಓದಲು ಆಸಕ್ತಿಯಿರುವ ಮಕ್ಕಳಿಗೆ ಹಣಕಾಸಿನ ಸಮಸ್ಯೆ ಏರ್ಪಟ್ಟು, ಅವರ ಭವಿಷ್ಯದ ಕನಸು ಅರ್ಧಕ್ಕೆ ನಿಲ್ಲಬಹುದಾದ ಸಾಧ್ಯತೆಯೂ ಹೆಚ್ಚಿರುತ್ತದೆ. ಹೀಗಾಗಿ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ವಿನೂತನ ಪ್ರಯತ್ನವೊಂದನ್ನು ಆರಂಭಿಸಿದೆ.
ಸಂಚಾರಿ ಲೈಬ್ರರಿ ಸ್ಥಾಪಿಸುವ ಉದ್ದೇಶವೇನು?:ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನೂತನವಾಗಿ ಆವಿಷ್ಕರಿಸಿರುವ 'ಸಂಚಾರಿ ಲೈಬ್ರರಿ'ಯನ್ನು ಹಳೆಯ ಬಸ್ಗಳನ್ನು ರೂಪಾಂತರಿಸಿ ಮಾಡಲಾಗಿದೆ. ಬಹುಮುಖ್ಯವಾಗಿ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ತೊಂದರೆ ಸೇರಿ ಇನ್ನಿತರ ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಈ ಮೊಬೈಲ್ ಲೈಬ್ರರಿ ಆವಿಷ್ಕರಿಸಲಾಗಿದೆ.
ಯಾವ ಪುಸ್ತಕಗಳ ಸಂಗ್ರಹವಿದೆ ?: ಸಂಚಾರಿ ಲೈಬ್ರರಿಯಲ್ಲಿ ಮುಖ್ಯವಾಗಿ ಆರೋಗ್ಯ ಹಾಗೂ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಕೃತಿಗಳು, ಜೀವನ ಚರಿತ್ರೆಗಳು, ಸಾಮಾನ್ಯ ಜ್ಞಾನ ಪುಸ್ತಕಗಳು, ಇಂಗ್ಲೀಷ್ ಸಾಹಿತ್ಯ, ಸಂವಿಧಾನ ಪುಸ್ತಕ, ದಿನಪತ್ರಿಕೆಗಳು, ಕವನ ಸಂಕಲನಗಳು, ನಾಟಕ ಪುಸ್ತಕಗಳು, ಸಾಮಾನ್ಯ ಜ್ಞಾನ, ಮಕ್ಕಳ ಪುಸ್ತಕಗಳು, ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಕಲೆ, ಸಾಹಿತ್ಯ, ನಾಟಕ, ಕಥೆ, ಕಾದಂಬರಿ ಹೀಗೆ ಹತ್ತಾರು ಬಗೆಯ ಸುಮಾರು 4 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹಗಳಿವೆ.