ಕಲಬುರಗಿ: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ. ಶಿಕ್ಷಕ ಮತ್ತು ಪದವೀಧರ ಮತದಾರರು ಕಾಂಗ್ರೆಸ್ ಪರ ತೀರ್ಪು ನೀಡಿದ್ದಾರೆ. ಹಿಜಾಬ್, ಆಜಾನ್ ಏನೇ ವಿವಾದ ಹುಟ್ಟುಹಾಕಿದರೂ ಕರ್ನಾಟಕದ ಮತದಾರರು ಉತ್ತರ ಪ್ರದೇಶದ ಮತದಾರರ ರೀತಿ ಅಲ್ಲ ಅನ್ನೋದು ಈ ಚುನಾವಣೆಯಿಂದ ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ನಾಲ್ಕು ಕೇತ್ರಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಅವರ ಗೆಲುವು ವೈಯಕ್ತಿಕವಾದುದು, ಅದು ಬಿಜೆಪಿ ಗೆಲುವಲ್ಲ. ಬಿಜೆಪಿ ಗೆದ್ದಿರುವುದು ಕೇವಲ ಒಂದೇ ಸ್ಥಾನ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಮಧು ಮಾದೇಗೌಡರ ಗೆಲುವು ಬಹಳ ವಿಶೇಷವಾಗಿದೆ. ಕರ್ನಾಟಕದಲ್ಲಿ ಪ್ರಬುದ್ಧ ಮತದಾರರಿದ್ದಾರೆ ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಯಾವ ಸೆಕ್ಷನ್ ಹಾಕಿದ್ದಾರೆ ಎಂದು ಹೇಳುತ್ತಿಲ್ಲ. ಆದರೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿ, ಅವರನ್ನು ವಿಚಾರಣೆಗೊಳಪಡಿಸಿ ದ್ವೇಷ ರಾಜಕೀಯ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.