ಕಲಬುರಗಿ: ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಅನ್ನೋ ಹಾಗೆ ಲೋಕಸಭೆ ಚುನಾವಣೆ ಮುಗಿದು ಎರಡು ವರ್ಷ ಕಳೆದ್ರೂ ಕಲಬುರಗಿಯಲ್ಲಿ ನಾಯಕರ ಮಧ್ಯದ ಟಾಕ್ ವಾರ್ ಮಾತ್ರ ನಿಂತಿಲ್ಲ. ಸಂಸದ ಉಮೇಶ್ ಜಾಧವ್, ಶಾಸಕ ಪ್ರಿಯಾಂಕ್ ಖರ್ಗೆ ಕೋಲಿ, ಕುರುಬ ಸಮಾಜವನ್ನ ಎಸ್‌ಟಿಗೆ ಸೇರಿಸುವ ವಿಚಾರದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದತ್ತ ಇಡೀ ದೇಶವೇ ಕಣ್ಣಟ್ಟಿತ್ತು. ಅದಕ್ಕೆ ಕಾರಣ ಕಾಂಗ್ರೆಸ್ನ ಹಿರಿಯ ಮುಖಂಡ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಉಮೇಶ್ ಜಾಧವ್ ಮಧ್ಯೆ ನಡೆದಿದ್ದ ಟಫ್ ಫೈಟ್.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸೋದಕ್ಕೆ ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ಕೋಲಿ ಮತ್ತು ಕರುಬ ಸಮುದಾಯವನ್ನ ಎಸ್‌ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನ ಸೋಲಿಸಿ ಉಮೇಶ್ ಜಾಧವ್ ಸಂಸತ್ ಪ್ರವೇಶ ಮಾಡಿದ್ರು. ಇದೀಗ ಅವರು ಲೋಕಸಭೆ ಪ್ರವೇಶಿಸಿ ಎರಡು ವರ್ಷ ಉರುಳಿದ್ರೂ ಕೂಡ ಕೋಲಿ ಮತ್ತು ಕರುಬ ಸಮಾಜವನ್ನ ಎಸ್‌ಟಿಗೆ ಸೇರ್ಪಡೆ ಮಾಡೋಕೆ ಮುಂದಾಗ್ತಿಲ್ಲ ಅಂತಾ ಸಂಸದ ಉಮೇಶ್ ಜಾಧವ್ ವಿರುಧ್ದ ಶಾಸಕ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲದೆ ಕೋಲಿ ಮತ್ತು ಕುರುಬ ಸಮುದಾಯವನ್ನ ಎಸ್‌ಟಿಗೆ ಸೇರ್ಪಡೆ ಮಾಡೋದಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಮನಸ್ಸು ಮಾಡಿದ್ರೆ ಖಂಡಿತಾ ಆಗುತ್ತೆ ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರಿಯಾಂಕ್ ಖರ್ಗೆಯನ್ನು ಮತ್ತಷ್ಟು ಕೆರಳಿಸಿದೆ. ಕಲಬುರಗಿ ಸಂಸದರು, ಶಾಸಕರು ಮಂತ್ರಿಗಿರಿಗಾಗಿ ದೆಹಲಿಗೆ ಓಡಾಡ್ತಾರೆ. ಆದ್ರೆ ಕೋಲಿ ಮತ್ತು ಕುರುಬ ಸಮುದಾಯವನ್ನ ಎಸ್‌ಟಿಗೆ ಸೇರಿಸೊಕೆ ಯಾಕೆ ಓಡಾಡ್ತಿಲ್ಲ. ಎರಡೂವರೆ ವರ್ಷ ಆದ್ರು ಯಾಕೆ ಇನ್ನು ಎಸ್‌ಟಿಗೆ ಸೇರಿಸಿಲ್ಲ? ಸಂಸದರು ಮತ್ತು ಶಾಸಕರು ಅಷ್ಟೊಂದು ಅಸಮರ್ಥರಾಗಿದ್ದಾರಾ ಅಂತಾ ಪ್ರಶ್ನಿಸಿದ್ದಾರೆ.
ಕೋಲಿ ಮತ್ತು ಕುರುಬ ಸಮುದಾಯವನ್ನ ಎಸ್‌ಟಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದರಿಗೆ ಪ್ರಶ್ನೆ ಮಾಡಿದ್ರೆ ಅವರ ಚೇಲಾಗಳು ಉತ್ತರ ಕೊಡ್ತಾರೆ. ಚೇಲಾಗಳ ಉತ್ತರ ಬೇಕಾಗಿಲ್ಲ. ಸಂಸದರೇ ಉತ್ತರ ಕೋಡಬೇಕು ಅಂತಾ ಒತ್ತಾಯಿಸಿ, ಸಂಸದ ಉಮೇಶ್ ಜಾಧವ್ಗೆ ಎರಡು ಮುಖ, ಎರಡು ನಾಲಿಗೆ ಇದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.