ಕಲಬುರಗಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆಯಲ್ಲಿ ಮೂರು ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಸೋಂಕು ತಗುಲಿದ್ದು, ಅವರೊಟ್ಟಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಹಲವರಲ್ಲಿ ಆತಂಕ ಮನೆಮಾಡಿದೆ. ಸದ್ಯ ಸೋಂಕು ದೃಢಪಟ್ಟ ಹಿನ್ನೆಲೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ಹೋಂ ಐಸೋಲೇಷನ್ಲ್ಲಿದ್ದಾರೆ
ಕಲಬುರಗಿ ಜನಪ್ರತಿನಿಧಿಗಳಿಗೆ ಬೆಂಬಿಡದ ಕೋವಿಡ್ :
ಈಗಾಗಲೇ ಅವರ ತಂದೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಸೋಂಕು ದೃಢಪಟ್ಟಿತ್ತು. ಇನ್ನೊಂದೆಡೆ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ಗೂ ಸಹ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇದೀಗ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೂ ಕೊರೊನಾ ಸೋಂಕು ವಕ್ಕರಿಸಿದೆ.
ಈ ಕುರಿತು ಸ್ವತಃ ಶಾಸಕ ಪ್ರಿಯಾಂಕ್ ಖರ್ಗೆ ಅವರೆ ಟ್ವೀಟ್ ಮಾಡಿದ್ದಾರೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ನಾನು ಪಾರಾಗಿದ್ದೆ. ಅಲ್ಲದೇ ಒಮ್ಮೆ ಸುಳ್ಳು ಪಾಸಿಟಿವ್ ವರದಿ ಕೂಡಾ ಬಂದಿತ್ತು. ಜೊತೆಗೆ ಹಲವಾರು ಬಾರಿ ನೆಗೆಟಿವ್ ವರದಿ ನಂತರ ಈಗ ಪಾಸಿಟಿವ್ ವರದಿ ಬಂದಿದೆ. ನನ್ನ ಸಿಬ್ಬಂದಿಗೆ ಪರೀಕ್ಷೆ ಮಾಡಿದಾಗ ಅವರಿಗೆ ನೆಗೆಟಿವ್ ವರದಿ ಬಂದಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ತಮ್ಮ ಜೊತೆ ಸಂಪರ್ಕ ಹೊಂದಿರುವ ಎಲ್ಲರೂ ಕೂಡಾ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸಿದ್ದಾರೆ.