ಕಲಬುರಗಿ: ತೈಲ ಬೆಲೆ ಏರಿಕೆ ಖಂಡಿಸಿದ ಜಿಲ್ಲಾ ಕಾಂಗ್ರೆಸ್, ನಗರದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪೆಟ್ರೋಲ್ ಖರೀದಿಸಿದ ಸವಾರರಿಗೆ ಕೇವಲ 50 ರೂಪಾಯಿಯಲ್ಲಿ ವಿತರಿಸುವ ಮೂಲಕ ಬೆಲೆ ಏರಿಕೆ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಜೇವರ್ಗಿ ರಸ್ತೆ, ಕೆಳ ಸೇತುವೆ ಹತ್ತಿರದ ಪೆಟ್ರೋಲ್ ಬಂಕ್ ಮುಂದೆ ಅನಗತ್ಯ ಇಂಧನ ತೆರಿಗೆ ಹೊರೆಯನ್ನು ಖಂಡಿಸಿ ಪ್ರತಿ ಲೀಟರ್ಗೆ 50 ರೂಗಳನ್ನು ವಿಧಿಸಿ ಬಿಲ್ ನೀಡಿ, ಬಿಜೆಪಿ ಟ್ಯಾಕ್ಸ್ ಮರುಪಾವತಿ ಎಂಬ ರಸೀದಿ ನೀಡಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ, ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 140 ಡಾಲರ್‌ವರೆಗೂ ಏರಿಕೆಯಾಗಿತ್ತು. ಆಗ 71ರೂ ಪೆಟ್ರೋಲ್ ದರ ನಿಗದಿ ಮಾಡಲಾಗಿತ್ತು. ಆದರೆ, ಇಂದು ಕಚ್ಚಾತೈಲದ ಬೆಲೆ 65 ಡಾಲರ್ ಆಸುಪಾಸಿನಲ್ಲಿದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.