ಕಲಬುರಗಿ: ಚಿತ್ತಾಪುರ ತಾಲೂಕಿನ 19 ಗ್ರಾಮಗಳನ್ನು ಶಹಾಬಾದ್ ಹಾಗೂ ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡುವುದಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ರಾಮಗಳ ಹಂಚಿಕೆ ಕುರಿತು ಕಂದಾಯ ಸಚಿವ ಆರ್.ಅಶೋಕ್ಗೆ ಪತ್ರ ಬರೆದಿರುವ ಶಾಸಕ ಪ್ರಿಯಾಂಕ್ ಖರ್ಗೆ, ಹಿಂದಿನ ಅಧಿಸೂಚನೆಯನ್ನು ಬದಿಗೊತ್ತಿ ಚಿತ್ತಾಪುರ ತಾಲೂಕಿನ 19 ಗ್ರಾಮಗಳನ್ನು ಶಹಾಬಾದ್ ಹಾಗೂ ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ.
2018ರಲ್ಲಿ ಅಂದಿನ ಸರ್ಕಾರ ಸಮಿತಿಗಳ ವರದಿ ಮತ್ತು ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯದಂತೆ ಅಧಿಸೂಚನೆ ಹೊರಡಿಸುವ ಮೂಲಕ ( ಸಂಖ್ಯೆ/ಆರ್ ಡಿ/ ಭೂದಾಪು 2017, ದಿನಾಂಕ: 30.01.2018 ) ಚಿತ್ತಾಪುರ ಹಾಗೂ ಚಿಂಚೋಳಿ ತಾಲೂಕನ್ನು ನೂತನ ಶಹಾಬಾದ್ ಮತ್ತು ಕಾಳಗಿ ತಾಲೂಕಾಗಿ ಘೋಷಿಸಿತ್ತು.
ಅದರ ಅನ್ವಯ 82 ಗ್ರಾಮಗಳು ಚಿತ್ತಾಪುರ ತಾಲೂಕಿನ ವ್ಯಾಪ್ತಿಗೆ ಒಳಪಡುತ್ತಿದ್ದವು. ಆದರೆ ಈಗಿನ ಸರ್ಕಾರ ಈ ಹಿಂದಿನ ಅಧಿಸೂಚನೆಯನ್ನು ಬದಿಗೊತ್ತಿ ಏಕಾಏಕಿ ಚಿತ್ತಾಪುರ ತಾಲೂಕಿನ 12 ಗ್ರಾಮಗಳನ್ನು ಕಾಳಗಿ ತಾಲೂಕಿಗೆ ಹಾಗೂ 7 ಗ್ರಾಮಗಳನ್ನು ಶಹಾಬಾದ್ ತಾಲೂಕಿಗೆ ಸೇರಿಸಿ ಕರಡು ಅಧಿಸೂಚನೆ ಮತ್ತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿ ಅದರಂತೆ ಅವರಿಂದ ವರದಿ ತರಿಸಿಕೊಳ್ಳಲಾಗಿದೆ.
ಗ್ರಾಮಗಳ ಹಂಚಿಕೆ ವಿರೋಧಿಸಿ ಪತ್ರ ಬರೆದಿರುವ ಖರ್ಗೆ ಆ ನಂತರ ದಿನಾಂಕ 30.05.2020ರಂದು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ ಚಿತ್ತಾಪುರ ತಾಲೂಕಿನ 12 ಗ್ರಾಮಗಳನ್ನು ಕಾಳಗಿ ತಾಲೂಕಿಗೆ ಹಾಗೂ 7 ಗ್ರಾಮಗಳನ್ನು ಶಹಾಬಾದ್ ತಾಲೂಕಿಗೆ ಸೇರಿಸಿದ್ದಾರೆ ಎಂದು ಆರೋಪಿಸಿ ಐದು ಅಂಶಗಳನ್ನು ಒಳಗೊಂಡ ಆಕ್ಷೇಪಣೆಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉಲ್ಲೇಖಿಸಲಾದ ಅಂಕಿ-ಅಂಶಗಳನ್ನು ಪರಿಗಣಿಸಿ ಗ್ರಾಮಗಳನ್ನು ವಿಂಗಡಣೆ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗಲಿದೆ. ಜೊತೆಗೆ ಸದರಿ ಗ್ರಾಮಗಳ ಸಾರ್ವಜನಿಕರು ಸರ್ಕಾರಿ ಇಲಾಖೆಗಳ ಕೆಲಸಕ್ಕಾಗಿ ತಾಲೂಕು ಕಚೇರಿಗಳಿಗೆ ಅಲೆಯುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಅಧಿಸೂಚನೆಯನ್ನು ರದ್ದುಪಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಕಾಳಗಿ ತಾಲೂಕಿನ 11 ಗ್ರಾಮಗಳನ್ನು ಹಾಗೂ ಶಹಾಬಾದ್ ತಾಲೂಕಿನ 5 ಗ್ರಾಮಗಳನ್ನು ಚಿತ್ತಾಪುರ ತಾಲೂಕಿಗೆ ಮರು ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದಾರೆ.