ಕಲಬುರಗಿ :ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿ ಮನೆಗೆ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ತೆರಳಿ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ನಗರದ ಭಾಗ್ಯವಂತಿ ನಗರ ನಿವಾಸಿ ಮಲ್ಲಿನಾಥ ಜಾಮಗೊಂಡ ಮನೆಗೆ ಭೇಟಿ ನೀಡಿ, ಮಲ್ಲಿನಾಥ ಅವರ ತಂದೆ ಅರವಿಂದ ಜಾಮಗೊಂಡ ಅವರೊಂದಿಗೆ ಅಲ್ಲಿನ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದರು.
ಕಲಬುರಗಿ ವಿದ್ಯಾರ್ಥಿ ಮನೆಗೆ ಶಾಸಕ ದತ್ತಾತ್ರೇಯ ಪಾಟೀಲ್ ಭೇಟಿ ಮಲ್ಲಿನಾಥ ಜಾಮಗೊಂಡ ಉಕ್ರೇನ್ನ ಕಾರ್ಖೀವ್ನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಅವರು ಸಿಲುಕಿದ್ದು, ಪೋಷಕರು ಆತಂಕದಲ್ಲಿದ್ದಾರೆ. ಹೀಗಾಗಿ ವಿದ್ಯಾರ್ಥಿ ಮಲ್ಲಿನಾಥ ಮನೆಗೆ ತೆರಳಿ ಮಲ್ಲಿನಾಥ ಜೊತೆ ಫೋನ್ ಮೂಲಕ ಶಾಸಕ ಮಾತನಾಡಿದರು.
ಸಾಧ್ಯವಾದಷ್ಟು ಸುರಕ್ಷಿತ ಸ್ಥಳಗಳಲ್ಲಿ ಇರಲು ಪ್ರಯತ್ನಿಸಿ. ಆದಷ್ಟು ಬೇಗ ನಿಮ್ಮನ್ನು ಕರೆ ತರುವ ಕಾರ್ಯ ನಡೆಯುತ್ತಿದೆ. ಈ ಕುರಿತು ಸಿಎಂ ಹಾಗೂ ಕೇಂದ್ರ ಸಚಿವರ ಜೊತೆ ಚರ್ಚಿಸುತ್ತೇನೆ. ಉಕ್ರೇನ್ ನಿಂದ ಭಾರತಿಯರನ್ನ ಕರೆತರುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆಂದು ಮಲ್ಲಿನಾಥಗೆ ಧೈರ್ಯ ಹೇಳಿದರು.
ಆತಂಕದಲ್ಲಿ ಪೋಷಕರು :ಮಗನ ಬರುವಿಕೆಯನ್ನು ಎದುರು ನೋಡುತ್ತಿರುವ ಪೋಷಕರು ಮಾಧ್ಯಮಗಳ ಮುಂದೆ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಉಕ್ರೇನ್ನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಹಕಾರ, ಸಹಾಯ ಸಿಗುತ್ತಿಲ್ಲ. ಮಕ್ಕಳು ನಿನ್ನೆ 12 ಕಿಲೋ ಮೀಟರ್ ನಡೆದುಕೊಂಡು ಹೋಗಿದ್ದಾರೆ. ಸದ್ಯ ನಡೆದುಕೊಂಡೇ ಹೋಗಿ ಸುರಕ್ಷಿತ ಸ್ಥಳ ತಲುಪಿದ್ದಾರೆ.
ರೈಲು ನಿಲ್ದಾಣಕ್ಕೆ ಹೋದರು ಅಲ್ಲಿನ ಸ್ಥಳೀಯರು ರೈಲು ಹತ್ತಲು ಬಿಡುತ್ತಿಲ್ಲವಂತೆ. ಹೀಗಾಗಿ ಬೇರೆ ಸೇಫ್ ಜಾಗದಲ್ಲಿ ವಾಸ್ತವ್ಯ ಮಾಡಿದ್ದಾನೆ. ರಾಯಭಾರ ಕಚೇರಿಯವರು ಯಾರು ಸಹಾಯ ಮಾಡುತ್ತಿಲ್ಲ. ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಹೀಗಾಗಿ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಇನ್ನಷ್ಟು ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಯ ಪೋಷಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.