ಕಲಬುರಗಿ:ಇಂದು ನಡೆಯುತ್ತಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಲು ನಾನಾ ಕಡೆಗಳಿಂದ ಜಿಲ್ಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ ಸಿಗದೆ ಗೊಂದಲದಲ್ಲಿ ಸಿಲುಕಿದರು. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಕಾರಣ ಪರೀಕ್ಷೆ ಆರಂಭವಾಗಿ ಒಂದು ಗಂಟೆ ಕಳೆದರೂ ಅಭ್ಯರ್ಥಿಗಳು ಮಾತ್ರ ತಮ್ಮ ಪರೀಕ್ಷಾ ಕೇಂದ್ರ ಹುಡುಕುವುದರಲ್ಲೇ ನಿರತರಾಗಿದ್ದರು.
ಜಿಲ್ಲೆಯಲ್ಲಿ ಟಿಇಟಿ ಪರೀಕ್ಷೆಗೆ ಒಟ್ಟು 62 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 16,984 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆದರೆ ಅಭ್ಯರ್ಥಿಗಳಿಗೆ ನೀಡಲಾದ ಕೆಲವು ಹಾಲ್ ಟಿಕೆಟ್ನಲ್ಲಿ ಸ್ಪಷ್ಟವಾಗಿ ಪರೀಕ್ಷಾ ಕೇಂದ್ರಗಳ ಹೆಸರು ನಮೂದಾಗಿಲ್ಲ. ಕೆಲವು ಹಾಲ್ ಟಿಕೆಟ್‌ಗಳಲ್ಲಿ ಪರೀಕ್ಷಾ ಕೇಂದ್ರದ ಹೆಸರು, ವಿಳಾಸ ಕೂಡಾ ಸ್ಪಷ್ಟವಾಗಿರಲಿಲ್ಲ. ಇದರಿಂದ ಪರೀಕ್ಷಾರ್ಥಿಗಳು ಕಂಗಾಲಾದರು.