ಕಲಬುರಗಿ: ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಜೋಳಿಗೆಯಲ್ಲಿ ಮಲಗಿಸಿದಾಗ ನಾಪತ್ತೆಯಾದ 9 ತಿಂಗಳ ಮಗು ಶವವಾಗಿ ಪತ್ತೆಯಾಗಿದೆ. ಪ್ರಾಣಿಗಳು ದಾಳಿ ನಡೆಸಿ ಮಗುವನ್ನು ಕೊಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಮಗು ಶವ ನೋಡಿದ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ.
ಇದೇ ಆಗಸ್ಟ್ 23 ರಂದು ಮಳ್ಳಿ ಗ್ರಾಮದಲ್ಲಿ 9 ತಿಂಗಳ ಮಗು ಬೀರಪ್ಪ ನಾಪತ್ತೆಯಾಗಿತ್ತು. ಕೂಲಿ ಕೆಲಸಕ್ಕೆ ತೆರಳಿದ ಶಾಂತಮ್ಮ, ಮರಕ್ಕೆ ಸೀರೆಯಿಂದ ಜೋಳಿಗೆ ಕಟ್ಟಿ ಮಗುವನ್ನು ಮಲಗಿಸಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಬಂದು ನೋಡಿದಾಗ ಮಗು ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಯಡ್ರಾಮಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಎರಡು ದಿನಗಳ ನಂತರ ಪಕ್ಕದ ನಿರ್ಜನ ಪ್ರದೇಶದಲ್ಲಿ ಕಂದಮ್ಮನ ಶವ ಪತ್ತೆಯಾಗಿದೆ.