ಕಲಬುರಗಿ: ಸಚಿವ ಪ್ರಭು ಚವ್ಹಾಣ್ ಜಿಲ್ಲಾ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದರು. ಕಚೇರಿಗೆ ಗೈರುಹಾಜರಾದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲು ಜಿಲ್ಲಾಧಿಕಾರಿ ಹಾಗೂ ಡಿಡಿ ಅವರಿಗೆ ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನಿಂದ ಯಶವಂತಪುರ ರೈಲಿಗೆ ಆಗಮಿಸಿದ್ದ ಸಚಿವರು, ಕಲಬುರಗಿ ಜಿಲ್ಲೆಯ ಹಲವೆಡೆ ಸಂಚಾರ ನಡೆಸಿದರು. ಅನಿರೀಕ್ಷಿತವಾಗಿ ಜಿಲ್ಲಾ ಪಶು ಆಸ್ಪತ್ರೆಗೆ ತೆರಳಿ ಸಿಬ್ಬಂದಿಗೆ ಶಾಕ್ ನೀಡಿದರು.
ಕಲಬುರಗಿ ಜಿಲ್ಲಾ ಪಶು ಆಸ್ಪತ್ರೆಗೆ ಸಚಿವರು ಭೇಟಿ ಪಶು ಆಸ್ಪತ್ರೆಯಲ್ಲಿನ ದುರಾವಸ್ಥೆ ಮತ್ತು ಆಡಳಿತಾತ್ಮಕ ದುರಾವ್ಯವಸ್ಥೆ ಕಂಡು ಗರಂ ಆದ ಸಚಿವರು, ಉಪ ನಿರ್ದೇಶಕ ಹನುಮಂತಪ್ಪ ಅವರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಆಸ್ಪತ್ರೆಯಲ್ಲಿ ತುಕ್ಕು ಹಿಡಿಯುತ್ತಿರುವ ಎಕ್ಸ್ ರೇ ಮಷಿನ್, ಪೀಠೋಪಕರಣ ನಿರ್ವಹಣೆ ಮಾಡುವಲ್ಲಿ ವಿಫಲರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಇದೆ ವೇಳೆ ಹಾಜರಾತಿ ಪರಿಶೀಲನೆ ಮಾಡಿದ ಸಚಿವರು, ಸತತ ಎರಡೂವರೆ ತಿಂಗಳಿಂದ ಕಚೇರಿಗೆ ಚಕ್ಕರ್ ಹೊಡೆಯುತ್ತಿರುವ ಡಿ ಗ್ರೂಪ್ ನೌಕರ ಉಪೇಂದ್ರ ಎಂಬಾತನ ಅಮಾನತಿಗೆ ಖಡಕ್ ಸೂಚನೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗೆ ಫೋನ್ ಮಾಡಿ ಇಲ್ಲಿನ ದುರಾವಸ್ಥೆಯ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ತಾಕೀತು ಮಾಡಿದರು.
ಸಚಿವರ ಅನಿರೀಕ್ಷಿತ ಭೇಟಿಯಿಂದ ಅಧಿಕಾರಿ ಮತ್ತು ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದರು. ಸಚಿವರಿಗೆ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಬಿಜೆಪಿ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಎಂಎಲ್ಸಿ ಶಶಿಲ್ ನಮೋಶಿ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದ್ರು.