ಬೆಂಗಳೂರು :ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ದೂರದೃಷ್ಟಿ ಚಿಂತನೆ ಉಳ್ಳವರು. ಸರ್ಕಾರ ನಿಂತ ನೀರಲ್ಲ ಹರಿಯುವ ನೀರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ಜೈ ಎಂದ ಸಚಿವ ವಿ ಸೋಮಣ್ಣ.. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೊಂದಲಮಯವಾಗಿದ್ದ ಬೆಳಗಾವಿ ಪಾಲಿಕೆ ಚುನಾವಣೆಗೆ ಜನ ಅಭೂತಪೂರ್ವ ಸಂದೇಶ ಕೊಟ್ಟಿದ್ದಾರೆ. ಅಲ್ಲಿನ ಜನರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ.
ಪಾಲಿಕೆ ಚುನಾವಣೆ ಅಲ್ಲಿ ಬೇರೆ ಬೇರೆ ಪಕ್ಷದವರು ಯಾವ ರೀತಿ ಹೇಳಿದರೂ ಅದೆಲ್ಲದಕ್ಕೆ ಜನ ಉತ್ತರ ಕೊಟ್ಟಿದ್ದಾರೆ. ಅದೇ ರೀತಿ ಶೇ. 17ರಷ್ಟು ಮೇಲ್ಪಟ್ಟು ಅಲ್ಪಸಂಖ್ಯಾತರು ವಾಸವಿರುವ ಕಲಬುರ್ಗಿಯಲ್ಲಿಯೇ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಜನರ ಜೊತೆ ಒಡನಾಟ, ಕೇವಲ ಒಂದೇ ತಿಂಗಳ ಅಂತರದಲ್ಲಿ ಬೊಮ್ಮಾಯಿ ಕೆಲಸಕ್ಕೆ ಜನರು ಆಶಾವಾದಿಯಾಗಿದ್ದಾರೆ. ಇನ್ನೂ ಕೂಡ ಉತ್ತಮವಾದ ಕೆಲಸಗಳು ಆಗುತ್ತಿವೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.
ಬೊಮ್ಮಾಯಿ ನಾಯಕತ್ವದ ಚುನಾವಣೆಗೆ ಸಚಿವ ಸೋಮಣ್ಣ ಜೈ : ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆಯಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಸೂಕ್ತವಾಗಿ, ಅವಶ್ಯಕವಾಗಿ ಮತ್ತು ಅರ್ಥಪೂರ್ಣವಾಗಿ ಹೇಳಿದ್ದಾರೆ ಎಂದರು.
ಬಿಎಸ್ವೈ ಅವರನ್ನು ಕಡೆಗಣಿಸಿಲ್ಲ :ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ಸರಿಯಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ. ಯಡಿಯೂರಪ್ಪನವರಿಗೆ ಯಡಿಯೂರಪ್ಪನವರೇ ಸಾಟಿ ಎಂದರು. ಸಹಜವಾಗಿ ಮುಖ್ಯಮಂತ್ರಿಯಾದವರೇ ಚುನಾವಣೆ ನೇತೃತ್ವವಹಿಸುತ್ತಾರೆ. ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ಜನರು ಆಶಾವಾದದಿಂದ ನೋಡುತ್ತಿದ್ದಾರೆ. ಅವರಿಗೆ ಜೈಕಾರ, ಇವರಿಗೆ ಜೈಕಾರ ಅಂತೇನಿಲ್ಲ. ಬಸವರಾಜ ಬೊಮ್ಮಾಯಿ ಸಮರ್ಥರಾಗಿದ್ದಾರೆ ಎಂದರು.