ಸಚಿವ ಶರಣ ಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ ಕಲಬುರಗಿ/ಬೆಂಗಳೂರು:ಸೇಡಂ ವಿಧಾನಸಭೆ ಕ್ಷೇತ್ರದ ಶೀರೊಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತಂತೆ ಸುಲಪೇಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಶರಣಪ್ರಕಾಶ ಪಾಟೀಲ್ ರಾಜೀನಾಮೆಗೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ತನ್ನ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವ ಪಾಟೀಲ್ ಕಾರಣ ಎಂದು ಮೂರು ಆಡಿಯೋ ರೆಕಾರ್ಡ್ ಮಾಡಿಟ್ಟು ಶಿವಕುಮಾರ್ ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಈ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಒತ್ತಾಯಿಸಿದ್ದಾರೆ.
ಕೇಂದ್ರ ಸಚಿವ ಭಗವಂತ ಖುಬಾ ಆಗ್ರಹ:ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದಕೇಂದ್ರ ಸಚಿವ ಭಗವಂತ ಖುಬಾ ''ಚಿಂಚೋಳಿ ತಾಲೂಕು ಶಿರೋಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ 3 ಆಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಆಡಿಯೋಗಳಲ್ಲಿ ಸಚಿವರ ಹೆಸರು ಕೇಳಿಬಂದಿರುವ ಕಾರಣ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು. ಸರ್ಕಾರದಿಂದ ತನಿಖೆ ಮಾಡಿಸಲು ಆಗದಿದ್ರೆ ಸಿಬಿಐ ತನಿಖೆಗೆ ಒಪ್ಪಿಸಲಿ. ನೈತಿಕ ಹೊಣೆ ಹೊತ್ತು ಶರಣಪ್ರಕಾಶ ಪಾಟೀಲ್ ರಾಜೀನಾಮೆ ನೀಡಬೇಕು. ಇಲ್ಲದಿದ್ರೆ ಸಿಎಂ ಸಿದ್ದರಾಮಯ್ಯ ಶರಣಪ್ರಕಾಶರನ್ನು ಸಂಪುಟದಿಂದ ವಜಾ ಮಾಡಿ ಸೂಕ್ತ ತನಿಖೆ ಕೈಗೊಳ್ಳಬೇಕು'' ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಭಗವಂತ ಖುಬಾ ಆಗ್ರಹ ಮತ್ತೊಂದೆಡೆ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಮಾತನಾಡಿ, ''ಆತ್ಮಹತ್ಯೆ ಮಾಡಿಕೊಂಡ ಶಿವಕುಮಾರ್ ಸಂಬಂಧಿಯಾದ ಶಿರೋಳ್ಳಿ ಗ್ರಾಮದ ನರಸಪ್ಪ ಪೂಜಾರಿ ಎಂಬಾತನ ಮೇಲೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಲ್ಲೆ ಮಾಡಿದ್ದಾರೆ. ಈ ವಿಚಾರವಾಗಿ ಶಿವಕುಮಾರ್ ಠಾಣೆಗೆ ದೂರು ಕೊಡಲು ಹೋದ್ರೆ ಮೊದಲು ದೂರು ಸ್ವೀಕರಿಸಿಲ್ಲ. ಅಲ್ಲದೆ ಆತನ ಮೇಲೆ ಮಾನಸಿಕ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ'' ಎಂದು ಆರೋಪಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ರೆ ಕಲಬುರಗಿ ಬಂದ್ ಮೂಲಕ ಹೋರಾಟ ಮಾಡುವುದಾಗಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಎಚ್ಚರಿಸಿದ್ದಾರೆ.
ಸಚಿವ ಶರಣ ಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ:ಕಲಬುರಗಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತನೋರ್ವ ತಮ್ಮ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಬಿಜೆಪಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ''ಈಗಾಗಲೇ ನಾನು ಮಾಧ್ಯಮದವರಿಗೆ ಈ ಬಗ್ಗೆ ಹೇಳಿದ್ದೇನೆ. ಆ ವ್ಯಕ್ತಿ ಯಾರು ಅನ್ನೋದು ಗೊತ್ತಿಲ್ಲ. ಅವರ ಮುಖವನ್ನು ನಾನು ಇಂದೇ ಮೊದಲ ಬಾರಿಗೆ ನೋಡಿರುವುದು. ನನಗೂ ಅದಕ್ಕೂ ಸಂಬಂಧ ಇಲ್ಲ'' ಎಂದರು.
''ಸುಮ್ಮನೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗೊತ್ತಿಲ್ಲ. ಯಾಕೆ ನನ್ನ ಹೆಸರು ಹೇಳಿದ ಅನ್ನೋದೇ ಗೊತ್ತಿಲ್ಲ. ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿ'' ಎಂದು ತಿಳಿಸಿದರು.