ಆರು ತಿಂಗಳಲ್ಲಿ ಬಿಜೆಪಿಯೇ ಉಳಿಯಲ್ಲ, ನಾನು ಗ್ಯಾರಂಟಿ ಕೊಡುತ್ತೇನೆ : ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ : ಕಾಂಗ್ರೆಸ್ ಪಕ್ಷದ ಹುಳುಕು ಹುಡುಕಲು ಪ್ರಯತ್ನಪಡುವ ಅರ್ಧದಷ್ಟು ಪ್ರಯತ್ನವನ್ನು ಪ್ರಾಮಾಣಿಕವಾಗಿ ನಿಮ್ಮ ಪಕ್ಷದ ಅಭಿವೃದ್ಧಿಗೆ ಬಳಸಿದರೆ ಸಾಕಾಗುತ್ತಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಆರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಪ್ರಧಾನ ಮಂತ್ರಿಯವರು ಮತ್ತೊಮ್ಮೆ ಮ್ಯಾನಿಫ್ಯಾಕ್ಚರ್ಡ್ ಮೆಜಾರಿಟಿ ಮಾಡ್ತಾರಾ ಎಂದು ಪ್ರಶ್ನಿಸಿದರು.
ಬಿಜೆಪಿ ತಿರಸ್ಕೃತವಾದ ರಾಜ್ಯಗಳಲ್ಲಿ ಆಪರೇಷನ್ ಕಮಲದ ಮಾಡುವ ಪದ್ಧತಿಯನ್ನು ಬಿಜೆಪಿಯವರು ಅಳವಡಿಸಿಕೊಂಡು ಬಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಅವರ ಆಟ ನಡೆಯಲಿಲ್ಲ. ಕಳೆದ ಬಾರಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರೂ ಸರ್ಕಾರವನ್ನು ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ವಿರುದ್ಧ ಟೀಕಾಪ್ರಹಾರ :ಬಿಜೆಪಿಯಲ್ಲಿ ಪ್ರತಿಪಕ್ಷದ ನಾಯಕರು ಕೂಡ ಇಲ್ಲದಂತಾಗಿದೆ. ಪಕ್ಷದಲ್ಲಿ ಆಂತರಿಕ ಜಗಳಗಳು ಹೆಚ್ಚಾಗಿವೆ. ಅವರ ಪಕ್ಷದ ಶಾಸಕರೊಬ್ಬರು ಕೇಂದ್ರ ಸಚಿವರ ಮೇಲೆ ಕೊಲೆ ಆರೋಪ ಹೊರಿಸಿದರೂ ಸುಮ್ಮನೆ ಕುಳಿತಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರ ಮಾತಿಗಂತೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬೊಮ್ಮಾಯಿಯವರು ದೆಹಲಿಗೆ ಹೋಗಿ ಬಂದು ಸುಸ್ತಾಗಿದ್ದಾರೆ. ಮೊದಲು ನಿಮ್ಮ ಪಕ್ಷವನ್ನು ಸರಿಪಡಿಸಿ, ಬಳಿಕ ನಮ್ಮ ಬಗ್ಗೆ ಮಾತನಾಡಿ. ರಾಜ್ಯದಲ್ಲಿ ಸುಭದ್ರ ಸರ್ಕಾರ ಇದೆ. ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಇದೇ ವೇಳೆ ಖರ್ಗೆ ಹೇಳಿದರು.
ವಿಪಕ್ಷದಲ್ಲಿದ್ದು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಮರೆತಿದ್ದೀರಾ. ಫೇಕ್ ಲೆಟರ್ ಮಾಡೋದ್ರಲ್ಲಿ ಕಾಲಹರಣ ಮಾಡುತ್ತಿದ್ದೀರಾ. ಇನ್ನು ಆರು ತಿಂಗಳಲ್ಲಿ ಬಿಜೆಪಿಯೇ ಉಳಿಯಲ್ಲ. ನಾನು ಗ್ಯಾರಂಟಿ ಕೊಡ್ತೀನಿ. ರಾಜಕೀಯ ಮಾಡೋಕೆ ಬಿಜೆಪಿಯಿಂದ ಅಷ್ಟೇ ಅಲ್ಲ, ನಮಗೂ ಬರುತ್ತೆ. ನಾವು 140 ವರ್ಷ ಪಕ್ಷ ನಡೆಸಿದ್ದೇವೆ. ಕರ್ನಾಟಕದಲ್ಲಿ ಇವರ ಆಟ ನಡೆದಿಲ್ಲ. ಮುಂದೆಯೂ ನಡೆಯುವುದಿಲ್ಲ ಎಂದರು.
ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ :ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಠಕ್ಕೆ ಹೋಗಿ ಯಾಕೆ ಪ್ರಮಾಣ ಮಾಡಬೇಕು?, ಬಿಜೆಪಿಯವರು ದೇವರನ್ನೂ ಬಿಟ್ಟಿಲ್ಲ. ದೇವರ ಹೆಸರ ಮೇಲೆ ಸುಳ್ಳು ಹೇಳೋರು ಬಿಜೆಪಿಯವರು. ದೇವರ ಹೆಸರಲ್ಲೇ ವಂಚನೆ ಮಾಡಿದವರು. ಅಜ್ಜಯ್ಯನ ಮಠದ ದೇವರ ಹತ್ತಿರ ಯಾಕೆ ಹೋಗ್ತೀರಾ?. ದಾಖಲೆ ಕೊಡಿ ನ್ಯಾಯಾಂಗಕ್ಕೆ ಹೋಗೋಣ. ಅವರ 40% ಸರ್ಕಾರದ ಎಲ್ಲ ದಾಖಲೆಗಳನ್ನು ಕೊಟ್ಟು ಎಸ್ಐಟಿ, ಸಿಸಿಬಿ, ಸಿಐಡಿ ನ್ಯಾಯಾಂಗ ತನಿಖೆ ನಾವು ಮಾಡಿಸ್ತಿಲ್ವಾ?. ಮಠ ಮಂದಿರಕ್ಕೆ ಹೋಗೋದು ಬೇಡ. ತನಿಖೆಗೆ ಬನ್ನಿ ದಾಖಲೆಗಳನ್ನು ಇಡಿ. ನ್ಯಾಯಾಲಯಕ್ಕೆ ಹೋಗೋಣ ಎಂದು ಹೇಳಿದರು.
ಉಪೇಂದ್ರ ಹೇಳಿರುವುದು ತಪ್ಪು :ಉಪೇಂದ್ರ ಪ್ರಕರಣದ ವಿಚಾರವಾಗಿ ಮಾತನಾಡಿದ ಖರ್ಗೆ, ಉಪೇಂದ್ರ ಹೇಳಿರೋದು ತಪ್ಪು. ಹಳೆ ಗಾದೆ ಆಡು ಭಾಷೆಯಲ್ಲಿ ಹೇಳ್ಬಿಟ್ಟೆ ಎಂದು ಹೇಳಿದ್ದಾರೆ. ಹಿರಿಯ ನಟ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ತಂದವರು. ಬಹಳ ಪ್ರಬುದ್ಧ ರಾಜಕೀಯ ಮಾಡಬೇಕೆಂದು ಹೊರಟವರು. ಇಂತಹ ಅಪ್ರಬುದ್ಧ ಹೇಳಿಕೆ ನೀಡಿದ್ರೆ ಯಾರಿಗಾದರೂ ನೋವಾಗುತ್ತದೆ. ಅವರ ಅಭಿಮಾನಿಗಳು ಎಲ್ಲ ಜಾತಿ, ಜನಾಂಗದಲ್ಲಿ ಇದ್ದಾರೆ. ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೂಡ ಕೇಳಿದ್ದಾರೆ. ಸಂವಿಧಾನಬದ್ಧವಾಗಿ ಕಾನೂನು ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ :ಹೆಚ್ಡಿಕೆಗೆ ನನ್ನ ಕಂಡರೆ ಭಯನಾ, ನನಗೆ ಅವರ ಕಂಡರೆ ಭಯನಾ ಎಂಬುದು ಚುನಾವಣೆಯಲ್ಲಿ ಗೊತ್ತಾಗುತ್ತೆ: ಸಚಿವ ಚಲುವರಾಯಸ್ವಾಮಿ