ಕಲಬುರಗಿ : ದೆಹಲಿ ಪ್ರವಾಸದ ಬಗ್ಗೆ ಹೊಸ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಹೈಕಮಾಂಡ್ ನನ್ನನ್ನು ದೆಹಲಿಗೆ ಕರೆದಿಲ್ಲ, ಇದು ಮಾಧ್ಯಮಗಳ ಸೃಷ್ಟಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರತಿ 15 ದಿನಕ್ಕೊಮ್ಮೆ ದೆಹಲಿ ಪ್ರವಾಸ ಮಾಡುತ್ತೇನೆ. ಅದರಂತೆ ಮೊನ್ನೆ ಕೂಡ ಹೋಗಿದ್ದೆ. ಇದು ದಿಢೀರ್ ಭೇಟಿಯೂ ಅಲ್ಲ, ಹೈಕಮಾಂಡ್ ಬುಲಾವ್ ಕೂಡ ಅಲ್ಲ. ನಾಳೆಯೂ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ವೈಯುಕ್ತಿಕ ಕೆಲಸದ ಜೊತೆಗೆ ಇಲಾಖೆಯ ಕಾರ್ಯ ನಿಮಿತ್ತ ದೆಹಲಿಗೆ ಹೋಗುತ್ತಿರುತ್ತೇನೆ ಎಂದರು.
ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಿ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನಿಜ. ನಾನು ಮುರ್ನಾಲ್ಕು ತಿಂಗಳ ಹಿಂದೆ ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಕೆಆರ್ಎಸ್ ಅಣೆಕಟ್ಟಿಗೆ ಅಪಾಯ ಇದೆ ಎಂಬ ಕಾರಣಕ್ಕೆ ಗಣಿಗಾರಿಕೆ ನಿಲ್ಲಿಸಲಾಗಿದೆ. ನಿನ್ನೆ ಬೇಬಿ ಬೆಟ್ಟಕ್ಕೆ ಗಣಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕಳಿಸಿದ್ದೇನೆ. ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೋ, ಅಲ್ಲಿ ಸರ್ವೇ ನಡೆಸಿ ಐದು ಪಟ್ಟು ದಂಡ ಹಾಕಿದ್ದೇವೆ ಎಂದರು.