ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಅಂತ ಇಂದು ಕಲಬುರಗಿಯಲ್ಲಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಲಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕಲಬುರಗಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಖಂಡ ಕರ್ನಾಟಕ ಒಂದಾಗಿ ಅಭಿವೃದ್ಧಿ ಪಥದಲ್ಲಿ ನಾವು ಮುಂದೆ ಬರಬೇಕು. ಒಂದೇ ಕರ್ನಾಟಕ, ಶ್ರೇಷ್ಠ ಕರ್ನಾಟಕ ಅಂತಾ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ಕರ್ನಾಟಕ ಇಬ್ಭಾಗವಾದರೆ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಬೆಂಗಳೂರು, ಹಳೆ ಮೈಸೂರಿಗೆ ಸಿಗುವ ಆದ್ಯತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುತ್ತಿಲ್ಲ ಅನ್ನೋ ಆರೋಪವಿದೆ. ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದವರಾಗಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಈ ಭಾಗಕ್ಕೆ ಅನ್ಯಾಯ ಆಗದೆ ಇರೋ ಹಾಗೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಉಪಚುನಾವಣೆ ಫಲಿತಾಂಶ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಹಾನಗಲ್, ಸಿಂದಗಿ ಬೈ ಎಲೆಕ್ಷನ್ನಲ್ಲಿ ಅತಿ ಹೆಚ್ಚಿನ ಲೀಡ್ನಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ನಾನು ಹಾನಗಲ್ ಕ್ಷೇತ್ರದ ಚುನಾವಣೆ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ. ಅಲ್ಲಿ 20 ಸಾವಿರ ಮತಗಳ ಅಂತರದಿಂದ ನಾವು ಗೆಲ್ಲುತ್ತೇವೆ. ಅದರಂತೆ ಸಿಂದಗಿಯಲ್ಲಿಯೂ ಮತದಾರರ ಒಲವು ಬಿಜೆಪಿ ಕಡೆ ಇದ್ದು, ಇಲ್ಲಿಯೂ 20 ಸಾವಿರ ಮತಗಳ ಲೀಡ್ನಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕಲಬುರಗಿಯಲ್ಲಿ ಪ್ರತ್ಯೇಕ ಧ್ವಜಾರೋಹಣಕ್ಕೆ ಮುಂದಾಗಿದ್ದ 20ಕ್ಕೂ ಅಧಿಕ ಮಂದಿ ಪೊಲೀಸ್ ವಶಕ್ಕೆ