ಕಲಬುರಗಿ: ಕಾಂಗ್ರೆಸ್ನವರು ಪಾದಯಾತ್ರೆ ಮಾಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಮಾಡಿದ್ದು ಹೆಚ್.ಡಿ ಕುಮಾರಸ್ವಾಮಿ ಅವಧಿಯಲ್ಲಿ. ಇದು ಕಾಂಗ್ರೆಸ್ ಪಕ್ಷದ ಪಾರ್ಟ್-2 ಅಷ್ಟೇ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಪಾದಯಾತ್ರೆ ಮಾಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ.
ಆದರೆ, ಕಾಂಗ್ರೆಸ್ನವರು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ಮೇಕೆದಾಟು ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ. ಕಾಂಗ್ರೆಸ್ನವರು ಅಧಿಕಾರದಲ್ಲಿ ಇದ್ದಾಗ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವ ಕೆ ಎಸ್ ಈಶ್ವರಪ್ಪ.. ಹಿಜಾಬ್ ವಿವಾದ : ಯು.ಟಿ.ಖಾದರ್ ನೇತೃತ್ವದಲ್ಲಿ ಎಲ್ಲಾ ಕಾಂಗ್ರೆಸ್ ಮುಸ್ಲಿಂ ಶಾಸಕರು ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರು ಹಿಜಾಬ್ ಗಲಾಟೆಗೆ ಎಸ್ಡಿಪಿಐ ಮತ್ತು ಪಿಎಫ್ಐ ಕಾರಣ ಎಂದು ಬ್ಯಾನ್ ಮಾಡಬೇಕು ಅಂತಾ ಹೇಳಿದ್ದಾರೆ. ರಾಜ್ಯದಲ್ಲಿ ಗಲಭೆ ಆಗೋದಕ್ಕೆ ಕಾಂಗ್ರೆಸ್ ಕಾರಣ, ಹಿಂದೂ-ಮುಸ್ಲಿಂ ದೂರ ದೂರ ಆಗಬೇಕು. ಮುಸ್ಲಿಂ ಮತಗಳು ಕಾಂಗ್ರೆಸ್ಗೆ ಬರಬೇಕು ಎಂದು ಈ ರೀತಿ ಕುತಂತ್ರ ರಾಜಕಾರಣವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಡಿಕೆಶಿ ರಾಷ್ಟ್ರದ್ರೋಹಿ : ರಾಷ್ಟ್ರಧ್ವಜಕ್ಕೆ ಯಾರು ಅಪಮಾನ ಮಾಡ್ತಾರೋ ಅವರು ರಾಷ್ಟ್ರದ್ರೋಹಿಗಳು ಅಂತಾ ಸ್ಪಷ್ಟವಾಗಿ ಹೇಳಿದ್ದೇನೆ. ರಾಷ್ಟ್ರಧ್ವಜಕ್ಕೆ ಮೊದಲು ಅಪಮಾನ ಮಾಡಿದ್ದೇ ಡಿ.ಕೆ ಶಿವಕುಮಾರ್, ಸದನದಲ್ಲಿ ರಾಷ್ಟ್ರಧ್ವಜ ಹಿಡಿದು 2ನೇ ಬಾರಿ ಅವಮಾನ ಮಾಡಿದ್ರು. ರಾಷ್ಟ್ರಪ್ರೇಮದ ಕುರಿತು ಕಾಂಗ್ರೆಸ್ನವರಿಗೆ ಗೊತ್ತಿಲ್ಲ. ಡಿಕೆಶಿ ಮೇಲೆ ಕೇಸ್ ಹಾಕಬೇಕು ಅಂತಾ ಸಿಎಂ ಮತ್ತು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.