ಕಲಬುರಗಿ:ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪರಿಶುದ್ಧವಾಗಿದ್ದರೆ ಸೀತೆಯಂತೆ ಪಾವಿತ್ರ್ಯತೆಯಿಂದ ಹೊರ ಬರಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಬೈ ಎಲೆಕ್ಷನ್ನಲ್ಲಿ ಸೋಲುವ ಭೀತಿಯಿಂದ ಡಿಕೆಶಿ ನಿವಾಸದ ಮೇಲೆ ಬಿಜೆಪಿ ಸಿಬಿಐ ಅಸ್ತ್ರ ಪ್ರಯೋಗಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದರು.
ಈ ಹಿಂದೆ ಯಡಿಯೂರಪ್ಪ ಮನೆ ಮೇಲೂ ಸಿಬಿಐ ದಾಳಿ ನಡೆದಿತ್ತು. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಆ ಟೈಮಲ್ಲಿ ಯಡಿಯೂರಪ್ಪ ತನಿಖೆ ಎದುರಿಸಿ ನಿರಪರಾಧಿಯಾಗಿ ಹೊರ ಬಂದರು. ಅದರಂತೆ ಡಿಕೆಶಿಯೂ ನಿರಪರಾಧಿ ಎಂದು ಸಾಬೀತು ಪಡಿಸಲಿ ಎಂದು ಟಾಂಗ್ ಕೊಟ್ಟರು.
ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ಕುರಿತಂತೆ ಈಶ್ವರಪ್ಪ ಪ್ರತಿಕ್ರಿಯೆ ಬಿಜೆಪಿ ನಾಯಕರ ಬಗ್ಗೆ ಸಿದ್ದರಾಮಯ್ಯ ಏಕವಚನ ಪ್ರಯೋಗ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಮಾತು ಅವರ ಸಂಸ್ಕೃತಿ ಏನಂತ ತೋರಿಸುತ್ತೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್, ತೇಜಸ್ವಿ ಸೂರ್ಯ ಬಗ್ಗೆ ಅವರು ಆಡಿರುವ ಮಾತುಗಳನ್ನು ಗಮನಿಸಿದ್ದೇನೆ. ಸಿದ್ದರಾಮಯ್ಯ ವರ್ತನೆಯಿಂದಾಗಿಯೇ ಕಾಂಗ್ರೆಸ್ ನೆಲಕಚ್ಚಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡರು. ಸಿಎಂ ಹುದ್ದೆಯಿಂದ ಕೆಳಗಿಳಿದು ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಈಗಲಾದರೂ ಬುದ್ಧಿ ಕಲಿಯಬೇಕು. ಅವರ ವರ್ತನೆ ಹೀಗೆ ಮುಂದುವರಿದರೆ ಕಾಂಗ್ರೆಸ್ ನೆಲದಿಂದಲೂ ಕೆಳಗೆ ಕುಸಿಯುತ್ತದೆ ಎಂದು ಸಚಿವ ಈಶ್ವರಪ್ಪ ಲೇವಡಿ ಮಾಡಿದರು.