ಕಲಬುರಗಿ:ನಾವು ಬಿಟ್ರೆ ತಾನೇ ಡಿ. ಕೆ ಶಿವಕುಮಾರ್, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದು? ಮುಖ್ಯಮಂತ್ರಿ ಸ್ಥಾನ ಏನು ಅವರ ಮನೆ ಕುರ್ಚಿನಾ? ಅವರು ಕನಸು ಕಾಣ್ತಿದ್ದಾರೆ ಅಷ್ಟೇ. ನಾವು ಅವರನ್ನು ಸಿಎಂ ಆಗಲು ಬಿಡೋದಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ ಎಂ ಕೃಷ್ಣ ಅವರ ಬಳಿಕ ಒಕ್ಕಲಿಗರಿಗೆ ಸಿಎಂ ಆಗುವ ಅದೃಷ್ಟ ಒಲಿದು ಬರಲಿದೆ ಎಂಬ ಡಿ. ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿಯೇ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಒಂದು ಕಡೆ ಸಿದ್ದರಾಮೋತ್ಸವ ನಡೆಯುತ್ತಿದೆ. ಮತ್ತೊಂದೆಡೆ ಡಿಕೆಶಿ ಈ ರೀತಿ ಮಾತನಾಡುತ್ತಿದ್ದಾರೆ. ಯಾವುದೇ ಉತ್ಸವಗಳು ನಡೆಯಲಿ. ಉತ್ಸವ ಮೂರ್ತಿಗಳು ದೇವಾಲಯದ ಹೊರಗೆ ಇರಬೇಕು. ಊರೆಲ್ಲಾ ಮೆರವಣಿಗೆ ಮಾಡಿ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಹೊರಗೆ ಇಡುತ್ತಾರೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕಾಗಿದೆ. ಸಿದ್ದರಾಮಯ್ಯ ಅವರ ಮುಂದಿನ ಪರಿಸ್ಥಿತಿಯೂ ಇದೇ ಆಗುತ್ತೆ ಎಂದು ವ್ಯಂಗ್ಯವಾಡಿದರು.
ಸಿದ್ಧಾಂತ ಗಾಳಿಗೆ ತೂರಿದ್ದಾರೆ:ತಾವು ಮುಂದಿನ ಮುಖ್ಯಮಂತ್ರಿ ಆಗಬಹುದು ಅಂದುಕೊಂಡಿರುವ ಸಿದ್ದರಾಮಯ್ಯ ಅವರು, ಒಂದು ಕ್ಷೇತ್ರಕ್ಕಾಗಿ ಅಲ್ಲಿ ಇಲ್ಲಿ ಅಂತಾ ಹುಡುಕಾಟ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು. ಪಕ್ಷ ಎಲ್ಲಿ ಸ್ಪರ್ಧಿಸಲು ಸೂಚಿಸುತ್ತದೆಯೋ ಅಲ್ಲಿ ನಾನು ಸ್ಪರ್ಧಿಸುತ್ತೇನೆ. ಸಿದ್ದರಾಮಯ್ಯನವರ ಬಗ್ಗೆ ಭಯ ಅನ್ನುವ ಪ್ರಶ್ನೆಯೇ ಇಲ್ಲ. ಸಮಾಜವಾದಿ ಸಿದ್ಧಾಂತದಿಂದ ಬಂದವರು ಈ ರೀತಿ ಉತ್ಸವ ಮಾಡುತ್ತ ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ ಎಂದು ಸಚಿವ ಶ್ರೀರಾಮುಲು ಆರೋಪಿಸಿದ್ರು.