ಕಲಬುರಗಿ: ಲಾಕ್ಡೌನ್ ಹಿನ್ನೆಲೆ ಗಣಿಗಾರಿಕೆಯನ್ನು ಬಂದ್ ಮಾಡಲಾಗಿದ್ದು, ಇದನ್ನೇ ನಂಬಿ ಬದುಕು ಸಾಗಿಸುತ್ತಿದ್ದ 50ಕ್ಕೂ ಅಧಿಕ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ.
ಕೊರೊನಾ ಕರಿನೆರಳು ಗಣಿ ಕಾರ್ಮಿಕರ ಬದುಕಿನ ಮೇಲೂ ಬಿದ್ದಿದ್ದು, ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪುರಸಭೆ ವ್ಯಾಪ್ತಿಗೆ ಬರುವ ಭಾರತ ಕ್ವಾರಿ ಬಡಾವಣೆಯ ನಿವಾಸಿಗಳು ಲಾಕ್ಡೌನ್ ನಿಂದಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಒಂದ್ ತಿಂಗಳಿನಿಂದ ಕಲ್ಲಿನ ಗಣಿ ಬಂದ್ ಮಾಡ್ಯಾರಾ. ಕಣ್ಯಾಗಾ ಕೂಲಿ ಮಾಡಿ ಬಂದ ನೂರಿನ್ನೂರು ರೂಪಾಯಿದಾಗ ಹೊಟ್ಟಿ ತುಂಬಸ್ಕೋಳತ್ತಿದ್ವಿ. ಈಗ ಅದುನ್ನೂ ಬಂದ್ ಮಾಡ್ಯಾರ. ನ್ಯಾವೆನ್ ಇರ್ಬೆಕಾ ಸಾಯಿಬೇಕ್ರೀ ಎಂದು ಇಲ್ಲಿನ ಜನ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ.
ಕೊರೊನಾ ಅಂತ ಹೇಳಿ ಮನೆಗೆ ಕುಂದ್ರಸ್ಯಾರ. ದುಡಿದು ತಿನ್ನುತ್ತಿದ್ದ ನಮ್ಗ ಕೈಯಾಗ ಕೆಲಸ ಇಲ್ಲ, ಹೊಟ್ಟಿಗಿ ಹಿಟ್ಟಿಲ್ಲ. ಮಕ್ಕಳ ಅತ್ತರ ಕೊಡೋಕ ಜೇಬಿನ್ಯಾಗ ಒಂದು ಪೈಸಾ ಇಲ್ಲ. ಈ ರಾಜಕಾರಣಿಗಳು ಎಲೆಕ್ಷನ್ ಟೈಮಿನ್ಯಾಗ್ ಬಂದು ಹೋಗ್ತಾರ, ನಮ್ಮ ಕಷ್ಟ ಕೇಳಾಕ ಯಾರು ಬರೋವಲ್ರೂ ಎಂದು ಜನಪ್ರತಿನಿಧಿಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಜನ.
ಹೊರಗಡೆ ಹೋದ್ರೆ ಪೊಲೀಸರು ಹೊಡೀತಾರ. ಮನೆಯಲ್ಲೇ ಇದ್ರ ಹೊಟ್ಟಿ ಹೆಂಗ್ ತುಂಬುತಾದ. ಭಾರತ್ ಕ್ವಾರಿ ಬಡಾವಣೆಯಲ್ಲಿ 50ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು, ಬಡತನದ ಬವಣೆ ಅನುಭವಿಸುತ್ತಿವೆ. ಲಾಕ್ಡೌನ್ ಆಗಿದ್ದಾಗಿನಿಂದ ಯಾರು ಬಂದು ಕೇಳಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪ ಮಾಡುತ್ತಿದ್ದಾರೆ.
ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೂ ಕೂಡ ಈ ಕಡೆ ತೆಲೆ ಹಾಕಿಯೂ ನೋಡಿಲ್ಲ. ರೇಷನ್ ಕಾರ್ಡ್ ಹೊಂದಿದವರಿಗೆ ತಲಾ 10 ಕೆ.ಜಿ ಯಂತೆ ಅಕ್ಕಿ, ಗೋದಿ ನೀಡಿದ್ದಾರೆ. ಅದ್ರೆ ಅವು ಈಗಾಗಲೇ ಖಾಲಿಯಾಗಿವೆ. ಇನ್ನು 15 ರಿಂದ 20ಕುಟುಂಬಗಳಿಗೆ ಇಲ್ಲಿ ಪಡಿತರ ಚೀಟಿಯೇ ಇಲ್ಲ. ಅಂತವರ ಕಷ್ಟವಂತೂ ಹೇಳತೀರದ್ದಾರೆ. ಸರ್ಕಾರ ಲಾಕ್ಡೌನ್ನಿಂದಾಗಿ ದುಡಿಯಲಾಗದೆ, ಹೊಟ್ಟೆಗೆ ಆಹಾರವಿಲ್ಲದೆ ಪರದಾಡುತ್ತಿರುವವರ ಕಷ್ಟಕ್ಕೆ ಸ್ಪಂದಿಸಬೇಕಿದೆ.
ಆದ್ರೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಅವರು, ಈ ಕುರಿತು ನಿನ್ನೆ ಗದಗನಲ್ಲಿ ಮಾತನಾಡಿದಾಗ, ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳೆಲ್ಲ ಗಣಿಗಾರಿಕೆ ಪುನಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಈ ಕಾರ್ಮಿಕರ ಅಳಲನ್ನು ಸಚಿವರು ಆಲಿಸಬೇಕಿದೆ.