ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಂಗನವಾಡಿ ಮಕ್ಕಳಿಗೆ ಪೂರೈಸಬೇಕಿದ್ದ ಹಾಲಿನ ಪೌಡರ್‌ನ ಅಕ್ರಮ ಸಾಗಾಟ ಮತ್ತು ಖರೀದಿ ಪ್ರಕರಣದಲ್ಲಿ ರಾಥೋಡ್ ಸೇರಿ ಮೂವರಿಗೆ ಯಾದಗಿರಿ ಜಿಲ್ಲಾ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ನಂದಿನಿ ಹಾಲಿನ ಪೌಡರ್ 500 ಗ್ರಾಂ.ನ ಒಟ್ಟು 340 ಪ್ಯಾಕೆಟ್ ಅಕ್ರಮ ಸಾಗಾಟದ ಆರೋಪದಡಿ 2015 ರಲ್ಲಿ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷಿಸಮೇತ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತನಿಖೆಯಲ್ಲಿ ಆರೋಪ ಸಾಬಿತಾಗಿದ್ದು ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಬಾಬುಗೌಡ ಪಾಟೀಲ್, ರಾಜೂಗೌಡ ಸೇರಿದಂತೆ ಮೂವರಿಗೆ ತಲಾ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ ದಂಡ ವಿಧಿಸಿ ಯಾದಗಿರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಹೊನ್ನಾಳಿ ತೀರ್ಪು ಪ್ರಕಟಿಸಿದ್ದಾರೆ.
ಇದಕ್ಕೂ ಮುನ್ನ, ಕಲಬುರಗಿ ಪೊಲೀಸ್ ಕಮಿಷನರ್ ಆಗಿದ್ದ ವೈ.ಎಸ್.ರವಿಕುಮಾರ್ ಅವರು ಮಣಿಕಂಠ ರಾಠೋಡ್ ಅವರನ್ನು ಗಡಿಪಾರು ಮಾಡಿ ಆದೇಶಿಸಿದ್ದರು. ಈ ಆದೇಶದ ವಿರುದ್ದ ರಾಠೋಡ್ ಮೇಲ್ಮನವಿ ಸಲ್ಲಿಸಿದ್ದು ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಇದೀಗ ಮತ್ತೊಂದು ಕಂಟಕ ಎದುರಾಗಿದೆ.
ಇದನ್ನೂ ಓದಿ:ಹಲವು ಪ್ರಕರಣಗಳಲ್ಲಿ ಭಾಗಿ: ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಶಿವಮೊಗ್ಗಕ್ಕೆ ಗಡಿಪಾರು
ಅನುಮಾನಾಸ್ಪದ ಶವ ಪತ್ತೆ:ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದ ಜಮೀನೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ದೇಗಲಮಡಿ ಗ್ರಾಮದ ರೇವಣಸಿದ್ದಪ್ಪ (72) ಮೃತರು. ಶನಿವಾರ ಸಂಜೆ ಹೊಲಕ್ಕೆ ಹೋಗುವುದಾಗಿ ಹೇಳಿದ್ದ ರೇವಣಸಿದ್ದಪ್ಪ ಮರಳಿ ಮನೆಗೆ ಬಂದಿರಲಿಲ್ಲ. ಬೆಳಗ್ಗೆ ಕುಟುಂಬಸ್ಥರು ಹೊಲಕ್ಕೆ ಹೋಗಿ ನೋಡಿದಾಗ ಶವವಾಗಿ ಪತ್ತೆಯಾಗಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದಂತೆ ಕಂಡಿದ್ದು, ಮೇಲ್ನೋಟಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರು ಚಿಂಚೋಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ.
ಕಾರ್-ಬೈಕ್ ಡಿಕ್ಕಿ, ಸವಾರ ಸಾವು:ಭಾನುವಾರ ಸಂಜೆಆಳಂದ ತಾಲೂಕಿನ ಇಕ್ಕಳಕಿ ಗ್ರಾಮದ ಬಳಿ ಕಾರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್ ಸವಾರ ಆಳಂದ ಪಟ್ಟಣದ ಸಾಜೀದ್ ಅನ್ಸಾರಿ(35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ ಬೈಕ್ನಲ್ಲಿ ಆಳಂದ ಪಟ್ಟಣದತ್ತ ತೆರಳುತ್ತಿದ್ದ ಸಾಜೀದ್ ಮತ್ತು ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಕಾರ್ ನಡುವೆ ಡಿಕ್ಕಿ ಸಂಭವಿಸಿದೆ. ಮಾಧನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇದನ್ನೂ ಓದಿ:ಕುಡಿದ ಅಮಲಿನಲ್ಲಿ ನಿಯಂತ್ರಣ ತಪ್ಪಿದ ಚಾಲಕ.. ಚಿಂತಾಮಣಿ ನಗರದಲ್ಲಿ ಸರಣಿ ಅಪಘಾತ