ಕಲಬುರಗಿ: ತಡರಾತ್ರಿಯಿಂದ ಸುರಿದ ಮಳೆ ಜಿಲ್ಲೆಯ ಜನರನ್ನು ಹೈರಾಣಾಗಿಸಿದೆ. ನಿರಂತರವಾಗಿ ಮಳೆರಾಯ ಆರ್ಭಟಿಸಿದ್ದು, ನಗರದ ಪೂಜಾ ಕಾಲೋನಿ ಸೇರಿ ಹಲವು ಬಡಾವಣೆಗಳಲ್ಲಿ ಮಳೆ ನೀರು ಆವರಿಸಿಕೊಂಡಿದೆ.
ಬಡಾವಣೆ ರಸ್ತೆಗಳಲ್ಲಿ ಸುಮಾರು ಅರ್ಧ ಅಡಿಯಷ್ಟು ನೀರು ಹರಿಯುತ್ತಿದ್ದು, ನಿವಾಸಿಗಳು ಸಂಚರಿಸಲು ಪರದಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಕಮಲಾಪುರ ತಾಲೂಕಿನ ಸೀರಗಾಪುರ, ಕಲಬುರಗಿ ತಾಲೂಕಿನ ಕುಂಸಿ ಗ್ರಾಮ ಮಳೆ ನೀರಿನಿಂದ ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು, ದವಸ ಧಾನ್ಯಗಳು ಹಾಳಾಗಿವೆ. ಮನೆಯಿಂದ ನೀರು ಹೊರ ಹಾಕಲು ನಿವಾಸಿಗಳು ಹರಸಾಹಸ ಪಟ್ಟಿದ್ದಾರೆ.