ಕಲಬುರಗಿ:ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ನಗರದಲ್ಲಿ ಕೇಸರಿ ಪಡೆ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ ಕೇಸರಿ ಬ್ರಿಗೇಡ್ ಬೃಹತ್ ಒಬಿಸಿ ಸಮಾವೇಶದ ಮೂಲಕ ಚುನಾವಣೆಗೆ ರಹಕಣಳೆ ಮೊಳಗಿಸಿದ್ದು, ಸಮಾವೇಶಕ್ಕೆ ನಾಯಕರು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾದರು.
ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಯಶಸ್ವಿಯಾಗಿ ಭಾರತ್ ಜೋಡೊ ಯಾತ್ರೆ ಮುಕ್ತಾಯವಾದ ಬೆನ್ನಲ್ಲೇ, ಇದೀಗ ಕೇಸರಿ ಬ್ರಿಗೇಡ್ ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಕೋನದಿಂದ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿದೆ. ನಗರದ ಕೆಸರಟಗಿ ಬಳಿಯ ರದ್ದೆವಾಡಗಿ ಲೇಔಟ್‌ನಲ್ಲಿ ಇಂದು ನಡೆದ ಬೃಹತ್ ಒಬಿಸಿ ವಿರಾಟ್ ಸಮಾವೇಶ ಬಿಜೆಪಿಗರ ನಿರೀಕ್ಷೆಯಂತೆ ಯಶಸ್ವಿ ಕಂಡಿದೆ.
ಸಮಾವೇಶಕ್ಕೆ ಜೋತಿ ಬೆಳಗಿಸುವ ಮೂಲಕ ಮಧ್ಯಪ್ರದೇಶದ ಸಿಎಂ ಶಿವರಾಜ್‌ಸಿಂಗ್ ಚೌವ್ಹಾಣ್ ಮತ್ತು ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ದಾರಿಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದ್ದು, ತಳವಾರ್/ಪರಿವಾರ ಸಮುದಾಯಗಳನ್ನ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ನಾನು ಕಲಬುರಗಿಗೆ ಖಾಲಿ ಕೈಯಿಂದ ಬಂದಿಲ್ಲ. ಬದಲಿಗೆ ತಳವಾರ್ ಮತ್ತು ಪರಿವಾರ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಿದ ಆದೇಶ ಪ್ರತಿ ತಂದಿದ್ದೇನೆ ಅಂತಾ ಸಮಾವೇಶದಲ್ಲಿ ಆದೇಶ ಪ್ರತಿ ಪ್ರದರ್ಶಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಆಗಮಿಸಿದ್ದು, ಒಬಿಸಿ ಸಮಾವೇಶದಲ್ಲಿ ಮಧ್ಯಪ್ರದೇಶದ ಸಿಎಂ ಶಿವರಾಜ್‌ಸಿಂಗ್ ಚೌವ್ಹಾಣ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಅನೇಕ ಹಿಂದುಳಿದ ವರ್ಗಗಳ ನಾಯಕರು ಭಾಗವಹಿಸಿದ್ದರು. ಸಮಾವೇಶದಲ್ಲಿ ಮಾತನಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌವ್ಹಾಣ್, ಸಮಾವೇಶದಲ್ಲಿ ಇಷ್ಟೊಂದು ಜನರನ್ನು ನೋಡುತ್ತಿದ್ದರೆ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.