ಕಲಬುರಗಿ: ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಮತದಾರನನನ್ನ ಒಲಿಸಿಕೊಳ್ಳುವ ಅಭ್ಯರ್ಥಿಗಳು, ಆಕಾಂಕ್ಷಿಗಳು ನಾನಾ ರೀತಿಯ ಉಡುಗೊರೆ ನೀಡುವ ಮೂಲಕ ಕಸರತ್ತು ನಡೆಸುತ್ತಿದ್ಧಾರೆ. ಇತ್ತ ಕಲಬುರಗಿಯ ಅಫಜಲಪುರ ಕ್ಷೇತ್ರದಲ್ಲಿ ಚುನಾವಣೆ ಲೆಕ್ಕಾಚಾರ ಶುರುವಾಗಿದೆ. ಕೈ ಟಿಕೆಟ್ ಪಡೆಯಲು ಅರ್ಜಿ ಹಾಕಿರುವ ಪಪ್ಪು ಪಟೇಲ್ ಸಾಮೂಹಿಕ ವಿವಾಹ ಮಾಡಿ ಜೋಡಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
16 ಜೋಡಿಗಳು ವೈವಾಹಿಕ ಬದುಕಿಗೆ ಪದಾರ್ಪಣೆ:ಒಂದೆಡೆ ಮದುವೆಯಾಗಿ ಕುಳಿತಿರುವ ಹೊಸ ಜೋಡಿಗಳು, ಇನ್ನೊಂದೆಡೆ ಮದುವೆಗೆ ಆಗಮಿಸಿರುವ ಸಹಸ್ರಾರು ಜನ. ಮತ್ತೊಂದೆಡೆ ನವ ಜೋಡಿಗಳಿಗೆ ಕೊಡಲು ಇಟ್ಟಿರುವ ಕಾಟ್, ಕಪಾಟು, ಬಟ್ಟೆ, ಪಾತ್ರೆಗಳು. ಇದು ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ನಡೆದ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ದೃಶ್ಯಗಳು. ಈ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಂದೆ ಅಥವಾ ತಾಯಿ ಇಲ್ಲದ ಅನಾಥ ಹಾಗೂ ಕಡು ಬಡತನ 16 ಜೋಡಿಗಳು ವೈವಾಹಿಕ ಬದುಕಿಗೆ ಪದಾರ್ಪಣೆ ಮಾಡಿದರು.
ನವ ಜೋಡಿಗಳಿಗೆ ಭರ್ಜರಿ ಉಡುಗೊರೆ: ಮದುವೆಯಾದ ನವ ಜೊಡಿಗಳಿಗೆ ಭರ್ಜರಿ ಉಡುಗೊರೆ ಸಹ ಪಪ್ಪು ಪಟೇಲ್ ನೀಡಿದ್ದಾರೆ. 16 ನವ ಜೋಡಿಗಳಿಗೆ ಚಿನ್ನದ ತಾಳಿ, ಕಾಲುಂಗುರ, ಕಾಟ್, ಅಲಮಾರ, ಬಟ್ಟೆ, ಪಾತ್ರೆಗಳು ಸೇರಿದಂತೆ ಇತರ ವಸ್ತುಗಳನ್ನ ಊಡುಗೊರೆಯಾಗಿ ನೀಡಿದ್ದಾರೆ. ಮಕ್ಕಳ ಮದುವೆ ಮಾಡಲು ಆಗದ ಬಡ ಪೋಷಕರಿಗೆ ಈ ಸಾಮೂಹಿಕ ಮದುವೆ ಕಾರ್ಯಕ್ರಮ ಆಸರೆಯಾಗಿದ್ದು, ಮಧು ಮಕ್ಕಳು ಹರ್ಷ ವ್ಯಕ್ತಪಡಿಸಿದ್ದಾರೆ.