ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚು: ಕರ್ನಾಟಕದ ಬಸ್​ಗೆ ಬೆಂಕಿ.. ಮಹಾರಾಷ್ಟ್ರಕ್ಕೆ ಸಂಚಾರ ತಾತ್ಕಾಲಿಕ ಸ್ಥಗಿತ - ಮೀಸಲಾತಿಗೆ ಒತ್ತಾಯಿಸಿ ಯುವಕ ಆತ್ಮಹತ್ಯೆ

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ಹಿಂಸಾಚಾರ ಸ್ವರೂಪ ಪಡೆದಿದೆ. ಪ್ರತಿಭಟನಾಕಾರರು ಇಲ್ಲಿನ ಶಾಸಕರ ಮನೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಜೊತೆಗೆ ಕರ್ನಾಟಕ ಸಾರಿಗೆ ಬಸ್​ಗೆ ಬೆಂಕಿ ಹಚ್ಚಲಾಗಿದ್ದು, ಮಹಾರಾಷ್ಟ್ರಕ್ಕೆ ಬಸ್​ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

maratha-reservation-protest-protestors-burnt-karnataka-bus-in-maharashtra
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚು : ಕೆಕೆಆರ್‌ಟಿಸಿ ಬಸ್​ಗೆ ಬೆಂಕಿ.. ಮಹಾರಾಷ್ಟ್ರಕ್ಕೆ ಸಂಚಾರ ತಾತ್ಕಾಲಿಕ ಸ್ಥಗಿತ

By ETV Bharat Karnataka Team

Published : Oct 31, 2023, 9:22 AM IST

Updated : Oct 31, 2023, 12:30 PM IST

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚು: ಕರ್ನಾಟಕದ ಬಸ್​ಗೆ ಬೆಂಕಿ.. ಮಹಾರಾಷ್ಟ್ರಕ್ಕೆ ಸಂಚಾರ ತಾತ್ಕಾಲಿಕ ಸ್ಥಗಿತ

ಕಲಬುರಗಿ :ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಸೋಮವಾರ ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕೆ ಸೇರಿದ ಕೆಕೆಆರ್‌ಟಿಸಿ ಬಸ್ಸಿಗೆ ಬೆಂಕಿ ಹಚ್ಚಿದ ಪರಿಣಾಮ ಅಂತರ ರಾಜ್ಯ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಕೆಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ತಿಳಿಸಿದ್ದಾರೆ.

ಸೋಮವಾರ ಬೀದರ್​ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಕೆಎ-38 ಎಫ್-1201 ಸಂಖ್ಯೆ ಬಸ್ಸಿಗೆ ಮಹಾರಾಷ್ಟ್ರದ ಉಮರ್ಗಾ ಬಳಿಯ ತರುರಿ ಗ್ರಾಮದಲ್ಲಿ ಬೆಂಕಿ ಹಚ್ಚಲಾಗಿದೆ. ಪ್ರತಿಭಟನಾಕಾರರು ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬಸ್​​ಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆ ತುಳಜಾಪುರ ಯಾತ್ರೆ ಸೇರಿದಂತೆ ಮಹಾರಾಷ್ಟ್ರಕ್ಕೆ ಅಂತರಾಜ್ಯ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರಾಚಪ್ಪ ಹೇಳಿದ್ದಾರೆ.

ಸ್ಥಳೀಯ ಪೊಲೀಸರ ನೆರವಿನಿಂದ ಬಸ್​ನಲ್ಲಿದ್ದ 39 ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯ ಸ್ಥಳಕ್ಕೆ ತೆರಳಲು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆಯಲ್ಲಿರುವ ಬಸ್​ಗಳನ್ನು ಹತ್ತಿರ ಪೊಲೀಸ್ ಠಾಣೆ, ಬಸ್ ಡಿಪೋಗಳಲ್ಲಿ ನಿಲುಗಡೆ ಮಾಡಲು ಸಂಸ್ಥೆಯ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚು: ಮರಾಠ ಮೀಸಲಾತಿಗೆ ಒತ್ತಾಯಿಸಿ ಕಳೆದ ಆಗಸ್ಟ್​ ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಕ್ಟೋಬರ್​ 25ರಂದು ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಅನಿರ್ದಿಷ್ಟವಾಧಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿತ್ತು. ಇದರಿಂದಾಗಿ ಮತ್ತೆ ರಾಜ್ಯಾದ್ಯಂತ ಮರಾಠ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಇದೀಗ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಶಾಸಕರ ಮನೆ ಮೇಲೆ ಕಲ್ಲು ತೂರಾಟ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್​ಗೆ ಪ್ರತಿಭಟನಾಕಾರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಸಲಾತಿಗಾಗಿ ಆಗ್ರಹಿಸಿ ಹೋರಾಟಗಾರ ಮನೋಜ್​ ಜಾರಂ ಇಲ್ಲಿನ ನವಿ ಮುಂಬೈನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಇವರ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದೆ. ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಅವರು ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿ ಇಲ್ಲವಾದರೆ ಮರಾಠರನ್ನು ಎದುರಿಸಿ. ಸರ್ಕಾರಕ್ಕೆ ಈ ಎರಡು ಆಯ್ಕೆಗಳು ಮಾತ್ರ ಉಳಿದಿವೆ. ಮರಾಠರಿಗೆ ಮೀಸಲಾತಿ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ. ಜೊತೆಗೆ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳುತ್ತದೆ ಎಂದು ಹೇಳಿದ್ದರು.

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ :ಮರಾಠಾ ಮೀಸಲಾತಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಬೀಡ್​ ಜಿಲ್ಲೆಯಲ್ಲಿ ಮೂವರು ಶಾಸಕರ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಇಬ್ಬರು ಎನ್​ಸಿಪಿ ಶಾಸಕರ ಮನೆ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು, ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ. ಎನ್​ಸಿಪಿ ಅಜಿತ್ ಪವಾರ್​ ಬಣದ ಶಾಸಕ ಪ್ರಕಾಶ್​ ಸೋಲಂಕೆ ಅವರ ಮನೆ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಜೊತೆಗೆ ಶಾಸಕ ಅಮರ್​ ಸಿಂಗ್​ ಪಂಡಿತ್​ ಮನೆ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಸ್ಥಳದಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ.

ಮೀಸಲಾತಿಗೆ ಒತ್ತಾಯಿಸಿ ಯುವಕ ಆತ್ಮಹತ್ಯೆ: ಮರಾಠ ಮೀಸಲಾತಿಗೆ ಒತ್ತಾಯಿಸಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಲ್ನಾದ ಕಚ್ರೇವಾಡಿ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಸೋಪನ್​ ಬಾಬುರಾವ್​ ಕಚ್ರೆ (30) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿನ ಬಾವಿಗೆ ಹಾರಿ ಸೊಪನ್​ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಬೆಳಗಾವಿ ಗಡಿಯಲ್ಲಿ ಕಟ್ಟೆಚ್ಚರ :ಮಹಾರಾಷ್ಟ್ರದಲ್ಲಿ ಮೀಸಲಾತಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿನ್ನಲೆ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕರ್ನಾಟಕ ಬಸ್​ಗೆ ಬೆಂಕಿ ಹಚ್ಚಿರುವ ಹಿನ್ನಲೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ತಡರಾತ್ರಿಯಿಂದ ಬೆಳಗಾವಿ ನಿಪ್ಪಾಣಿ, ಕಾಗವಾಡ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಂಚರಿಸುವ ನೂರಾರು ಬಸ್​ಗಳನ್ನು ಕರ್ನಾಟಕ ಗಡಿ ಭಾಗದವರಿಗೆ ಮಾತ್ರ ಸಂಚಾರ ನಡೆಸಿವೆ.

ಬೆಳಗಾವಿ ಗಡಿಯಲ್ಲಿ ಕಟ್ಟೆಚ್ಚರ

ಕಾಗವಾಡ ನಿಪ್ಪಾಣಿ ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮಹಾರಾಷ್ಟ್ರಕ್ಕೆ ಪ್ರಯಾಣಿಸುವವವರು ಕರ್ನಾಟಕದ ಗಡಿಯವರಿಗೆ ತೆರಳಿ, ಬಳಿಕ ಖಾಸಗಿ ವಾಹನ ಹಾಗೂ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಎರಡು ರಾಜ್ಯದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.

ಇದನ್ನೂ ಓದಿ :ಅಜಿತ್ ಪವಾರ್ ಬಣದ ಎನ್‌ಸಿಪಿ ಶಾಸಕನ ಮನೆ ಮೇಲೆ ಮರಾಠ ಮೀಸಲಾತಿ ಹೋರಾಟಗಾರರ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

Last Updated : Oct 31, 2023, 12:30 PM IST

ABOUT THE AUTHOR

...view details