ಕಲಬುರಗಿ: ನಾಪತ್ತೆಯಾದ ವ್ಯಕ್ತಿಯೊಬ್ಬರು 12 ವರ್ಷಗಳ ತರುವಾಯ ಮನೆಗೆ ಮರಳಿರುವ ಘಟನೆ ಜಿಲ್ಲೆಯ ಲಾಡ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ. ಈ ವ್ಯಕ್ತಿಯ ಹೆಸರು ಚಂದ್ರಕಾಂತ ಹರವಾಳ (45). ಇವರಿಗೆ ಮನೆ ಬಿಟ್ಟು ಹೋಗುವಾಗ 33 ವರ್ಷದ ವಯಸ್ಸಾಗಿತ್ತಂತೆ. ಹೆಂಡತಿ ಗುರುಬಾಯಿ ಜೊತೆ ಸಂಸಾರ ನಡೆಸುತ್ತಿದ್ದ ಚಂದ್ರಕಾಂತ, ತಮ್ಮ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಿದ್ದರು. ಆದರೆ ಅದೊಂದು ದಿನ ಮನೆಯಿಂದ ಹೊರ ಹೋದವರು ಮತ್ತೆ ಮನೆಗೆ ಬರಲಿಲ್ಲ.
ಈಗ ಬರಬಹುದು ಆಗ ಬರಬಹುದೆಂದು ದಾರಿ ನೋಡುತ್ತಿದ್ದ ಕುಟುಂಬಸ್ಥರು ನಿರಾಶೆ ವ್ಯಕ್ತಪಡಿಸುತ್ತಿದ್ದರು. ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಇಡೀ ಕುಟುಂಬ ನೋಡಿಕೊಳ್ಳುತ್ತಿದ್ದ ಮನೆಮಗ ಕಾಣೆಯಾಗಿದ್ದರಿಂದ ಕುಟುಂಬ ಸದಸ್ಯರು ಕಂಗಾಲಾಗಿದ್ದರು.
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಂಡ ಕಂಡ ದೇವರಿಗೆ ಕೈ ಮುಗಿದು ಹರಕೆ ಹೊತ್ತರೂ ವ್ಯಕ್ತಿ ಎಲ್ಲಿದ್ದಾನೆ?, ಕನಿಷ್ಠ ಪಕ್ಷ ಜೀವಂತವಾಗಿದ್ದಾನಾ? ಎಂಬ ಬಗ್ಗೆಯೂ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಕುಟುಂಬಸ್ಥರು ನಾಲ್ಕಾರು ವರ್ಷ ಹುಡುಕಿ ಕಡೆಗೆ ಸೋತು ಕೈಚೆಲ್ಲಿದ್ದರು. ಆದರೆ ವಾರದ ಹಿಂದೆ ನಿಮ್ಮ ಪತಿ ನಮ್ಮ ಬಳಿ ಇದ್ದಾರೆ ಎಂಬ ಮೊಬೈಲ್ ಕರೆ ಬಂದಾಗ ಚಂದ್ರಕಾಂತ ಅವರ ಪತ್ನಿ ಹಾಗೂ ಕುಟುಂಬ ಸದಸ್ಯರ ಸಂತೋಷಕ್ಕೆ ಪಾರವೇ ಇರಲಿಲ್ಲ.