ಕಲಬುರಗಿ :ಪಡೆದ ಸಾಲ ವಾಪಸ್ ನೀಡುವ ಬದಲಾಗಿ ಸಾಲ ಕೊಟ್ಟವನ ಜೀವ ತೆಗೆದು ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನ ಘಟನೆ ನಡೆದ 72 ಗಂಟೆಯೊಳಗೆ ವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ತಾಪುರ ನಿವಾಸಿ ರಹೆಮಾನ್ ಶೇಖ್ (44) ಹಾಗೂ ಕಲಬುರಗಿಯ ಖಾಜಾ ಕೋಟನೂರ್ ನಿವಾಸಿ ಮಹಮ್ಮದ್ ಲಾಲ್ ಸಾಬ್ (52) ಬಂಧಿತ ಆರೋಪಿಗಳು. ಜ.10ರಂದು ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ಯರಗಲ್ ಕ್ರಾಸ್ ಬಳಿ ಮಂಜುನಾಥ ತೆಗನೂರ ಎಂಬಾತನ ಕಣ್ಣಿಗೆ ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಬಳಿಕ ಸೈಜುಗಲ್ಲು ತೆಲೆ ಮೇಲೆ ಹಾಕಿ ಗುರುತು ಸಿಗದಂತೆ ಮಾಡಿ ಪರಾರಿಯಾಗಿದ್ದರು.
ಕೊಲೆ ಹಿಂದಿನ ರಹಸ್ಯ :ಕೊಲೆಯಾದ ಮಂಜುನಾಥ ಕಲಬುರಗಿಯ ಗಾಜೀಪುರ ನಿವಾಸಿಯಾಗಿದ್ದು, ಚಿನ್ನದ ವ್ಯಾಪಾರ ಹಾಗೂ ಹಣದ ಲೇವಾದೇವಿ ಕೆಲಸ ಮಾಡುತ್ತಿದ್ದನಂತೆ. ಹೀಗಿರುವಾಗ ಕಲಬುರಗಿಯ ಖಾಜಾಕೋಟನೂರ ನಿವಾಸಿ ಮಹಮ್ಮದ್ ಲಾಲ್‌ಸಾಬ್ ಮಂಜುನಾಥ ಬಳಿ 12 ಲಕ್ಷ ರೂಪಾಯಿ ಸಾಲ ಪಡೆದಿದ್ದ.
ಸಾಲ ಪಡೆಯುವಾಗ ತನ್ನ ಜಮೀನು ಅಡವಿಟ್ಟು ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡದಿದ್ರೆ, ಜಮೀನು ಮಂಜುನಾಥಗೆ ನೀಡುವ ಅಗ್ರಿಮೆಂಟ್ ಮಾಡಿದ್ದನು. ಆದರೆ, ಅಗ್ರಿಮೆಂಟ್ ಅವಧಿ ಮುಗಿದು ಎರಡು ವರ್ಷ ಕಳೆದರು ಲಾಲ್‌ಸಾಬ್ ಹಣ ಹಿಂದಿರುಗಿಸಿರಲಿಲ್ಲ. ಸಹಜವಾಗಿ ಮಂಜುನಾಥ ಹಣ ಹಿಂದಿರುಗಿಸು, ಇಲ್ಲದಿದ್ದರೆ ಜಮೀನು ರಿಜಿಸ್ಟರ್ ಮಾಡಿಕೊಡುವಂತೆ ಲಾಲ್‌ಸಾಬ್ ಬೆನ್ನು ಬಿದ್ದಿದ್ದ.
ಜಮೀನ ಬಿಟ್ಟುಕೊಡಲು ಲಾಲ್‌ಸಾಬ್ ತಯಾರಿದ್ದರೂ ಆತನ ಪತ್ನಿ ಜಮೀನು ಕಳೆದುಕೊಳ್ಳಲು ತಯಾರಿರಲಿಲ್ಲ. ಸಾಲ ನೀನು ಮಾಡಿದ್ದು ಹೇಗಾದ್ರೂ ತಿರಿಸು ಅಂತಾ ಗಂಡನೊಂದಿಗೆ ಜಗಳವಾಡಿದ್ದಳಂತೆ. ಇದರಿಂದ ಕಂಗಾಲಾಗಿದ್ದ ಲಾಲ್‌ಸಾಬ್ ತನ್ನ ಸಂಬಂಧಿಯಾದ ರಹಮಾನ್ ಶೇಖ್‌ನೊಂದಿಗೆ ಸೇರಿ ಮಂಜುನಾಥನ ಕಥೆ ಮುಗಿಸಲು ಪ್ಲಾನ್ ಮಾಡಿದ್ದ.
ಹಣ ನೀಡುವುದಾಗಿ ಕರೆದು ಪ್ರಾಣ ತೆಗೆದರು :ಪ್ಲಾನ್ ಪ್ರಕಾರ ಹಣ ಕೊಡುವುದಾಗಿ ಮಂಜುನಾಥನನ್ನು ಚಿತ್ತಾಪುರಕ್ಕೆ ಕರೆಸಿಕೊಂಡಿದ್ದಾರೆ. ತಮ್ಮದೆ ಗೂಡ್ಸ್ ವಾಹನದಲ್ಲಿ ಮಂಜುನಾಥನನ್ನು ಕರೆದುಕೊಂಡು ಊರೆಲ್ಲಾ ಸುತ್ತಾಡಿದ್ದಾರೆ. ಪಕ್ಕದ ಯಾದಗಿರಿ ಜಿಲ್ಲೆಗೆ ಹೋಗಿ ಬಂದಿದ್ದಾರೆ. ಹಣದ ವ್ಯವಸ್ಥೆ ಆಗಿಲ್ಲ, ನಾಳೆ ಖಂಡಿತಾ ಕೊಡುತ್ತೇವೆ ಅಂತಾ ನಂಬಿಸಿ ವಾಪಸ್ ಚಿತ್ತಾಪುರಕ್ಕೆ ಕರೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ!
ಮಾರ್ಗಮಧ್ಯೆ ರಾವೂರ ಬಳಿಯ ಯರಗಲ್ ಕ್ರಾಸ್ ಹತ್ತಿರ ಗೂಡ್ಸ್ ವಾಹನ ನಿಲ್ಲಿಸಿ ಡೀಸೆಲ್ ಖಾಲಿ ಆಗಿದೆ ಏನಾದ್ರೂ ವ್ಯವಸ್ಥೆ ಮಾಡುತ್ತೇವೆ ಅಂತಾ ಹೇಳಿ ಕೆಳಗೆ ಇಳಿದಿದ್ದಾರೆ. ಆದ್ರೆ, ಕೊಲೆಗಡುಕರ ಪ್ಲಾನ್ ಬಗ್ಗೆ ಏನು ಅರಿವಿಲ್ಲದ ಮಂಜುನಾಥ, ವಾಹನದಲ್ಲಿಯೇ ಕುಳಿತು ಮೊಬೈಲ್ ನೋಡುತ್ತಾ ಕುಳಿತಿದ್ದ. ಇದೇ ಸಮಯ ಬಳಸಿಕೊಂಡು ಆರೋಪಿಗಳು ಒಬ್ಬ ಕಣ್ಣಿಗೆ ಕಾರದ ಪುಡಿ ಎರಚಿ ಇನ್ನೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ರಸ್ತೆ ಪಕ್ಕದಲ್ಲಿ ತೆಲೆಯ ಮೇಲೆ ಸೈಜುಗಲ್ಲು ಹಾಕಿ ಗುರುತು ಸಿಗದಂತೆ ಮಾಡಿ ತೆಲೆ ಮರೆಸಿಕೊಂಡಿದ್ದರು.
72 ಗಂಟೆಯಲ್ಲಿ ಆರೋಪಿಗಳ ಸೆರೆ :ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಇಶಾ ಪಂತ್, ಎರಡು ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದರು. ಕೊಲೆ ನಡೆದು ಕೇವಲ 72 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಇಬ್ಬರನ್ನು ಕಂಬಿ ಹಿಂದೆ ತಳ್ಳಿದ್ದಾರೆ. ಆದ್ರೆ, ಹಣ ನೀಡಿದ ತಪ್ಪಿಗೆ ಹಾಗೂ ಹಣ ಮರಳಿಸುವುದಾಗಿ ಕರೆದಾಗ ಏನನ್ನು ಯೋಚನೆ ಮಾಡದೆ ಹೋಗಿದ್ದ ತಪ್ಪಿಗೆ ಪಾಪದ ಮಂಜುನಾಥ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ. ಆತನ ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.