ಕಲಬುರಗಿ: ಆತ ತಾನಾಯಿತು ತನ್ನ ಕೆಲಸವಾಯ್ತು ಅಂತಾ ಟೆಂಟ್ ಹೌಸ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ. ಇಬ್ಬರು ಪತ್ನಿಯರನ್ನು ಹೊಂದಿದ್ದ ಆತ ಮೊದಲನೆಯವಳನ್ನ ಬಿಟ್ಟು 2ನೇ ಪತ್ನಿ ಜೊತೆ ವಾಸ ಮಾಡುತ್ತಿದ್ದ. ಆದರೆ 2ನೇ ಹೆಂಡತಿಯ ಸಹೋದರರಿಗೆ ಕೊಟ್ಟ ಹಣ ವಾಪಸ್ ಕೇಳಿದ್ದ. ಇಷ್ಟೇ ನೋಡಿ ದಸರಾ ಹಬ್ಬದ ನಿಮಿತ್ತ ಭಾವನಿಗೆ ಬನ್ನಿ ಕೊಡುವ ನೆಪದಲ್ಲಿ ಬಂದಿದ್ದ ಭಾಮೈದರು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಲಕ್ಷ್ಮೀಪುತ್ರ (35) ಹತ್ಯೆಗೀಡಾದ ವ್ಯಕ್ತಿ. ಕಲಬುರಗಿ ನಗರದ ಸಂತೋಷ ಕಾಲೋನಿ ನಿವಾಸಿಯಾಗಿರುವ ಲಕ್ಷ್ಮೀಪುತ್ರ ಇಬ್ಬರು ಪತ್ನಿಯರನ್ನ ಹೊಂದಿದ್ದರು. ಮೊದಲನೇ ಪತ್ನಿ ಶಶಿಕಲಾಳನ್ನ ಬಿಟ್ಟು ಎರಡನೇ ಪತ್ನಿ ಪ್ರೀತಿ ಜೊತೆ ವಾಸವಿದ್ದರು. ಲಕ್ಷ್ಮೀಪುತ್ರ ಜೀವನೋಪಾಯಕ್ಕಾಗಿ ಸಂತೋಷ ಕಾಲೋನಿಯಲ್ಲಿ ಟೆಂಟ್ ಹೌಸ್ ನಡೆಸಿಕೊಂಡು ಹೋಗುತ್ತಿದ್ದರು. ಈ ನಡುವೆ ಎರಡನೇ ಪತ್ನಿ ಸಹೋದರರಾದ ಶಿವಕಾಂತ್ ಮತ್ತು ಪ್ರಶಾಂತ್ನಿಗೆ 8 ಲಕ್ಷ ಹಣವನ್ನ ಸಾಲ ನೀಡಿದ್ದರು. ಕೆಲ ದಿನಗಳ ನಂತರ ಸಾಲ ವಾಪಾಸ್ ಕೇಳಿದ್ದಕ್ಕೆ ಕೊಡ್ತಿನಿ ಕೊಡ್ತಿನಿ ಅಂತಾ ದಿನ ದೂಡುತ್ತ ಬಂದಿದ್ದರು.
ಬನ್ನಿಕೊಟ್ಟು ಕಾಲು ಬೀಳುವ ನೆಪದಲ್ಲಿ ಹಲ್ಲೆ:ಅ.2 ರಂದು ಹಣ ಕೊಡ್ತಿವಿ ಅಂತಾ ಶಿವಕಾಂತ್ ಮತ್ತು ಪ್ರಶಾಂತ್ ಒಪ್ಪಿಕೊಂಡಿದ್ದರು. ಆದರೆ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಭಾವನ ಕಥೆ ಮುಗಿಸಲು ಸ್ಕೆಚ್ ಹಾಕಿದ್ದರು. ದಸರಾ ಹಬ್ಬದ ನಿಮ್ಮಿತ್ತ ಭಾವನಿಗೆ ಬನ್ನಿ ಕೊಡಲು ಅಂತಾ ಇಬ್ಬರು ನಗರದ ಯಶವಂತ ನಗರದಲ್ಲಿರುವ ಮನೆಗೆ ಬಂದಿದ್ದಾರೆ. ಬನ್ನಿ ಕೊಟ್ಟು ಕಾಲು ಬೀಳುವ ನೆಪದಲ್ಲಿ ಜೊತೆಯಲ್ಲಿ ತಂದಿದ್ದ ಮಾರಕಾಸ್ತ್ರಗಳಿಂದ ಭಾವ ಲಕ್ಷ್ಮೀಪುತ್ರನನ್ನ ಮನಬಂದಂತೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಸಹೋದರಿ ಎದುರಲ್ಲೇ ಭಾವನ ಕೊಲೆ:ಕೊಲೆ ಸಂದರ್ಭದಲ್ಲಿ ತಮ್ಮ ಸಹೋದರಿ ಪ್ರೀತಿ ಮನೆಯಲ್ಲಿಯೇ ಇದ್ದರು. ಆದರೂ ಲೆಕ್ಕಿಸದೆ ಆಕೆಯ ಎದುರು ಕೊಲೆ ಮಾಡಿ ಪರಾರಿಯಾದರು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಕತೆ ಮುಗಿದಿತ್ತು. ಹುಚ್ಚಿಯಂತೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಂಡನ ಪಕ್ಕದಲ್ಲಿ ಕುಳಿತು ಕಣ್ಣೀರು ಹಾಕುತ್ತ ಸಹೋದರರ ವಿರುದ್ಧ ಹಿಡಿ ಶಾಪ ಹಾಕಿದರು.