ಕಲಬುರಗಿ:ಬಾಲಕಿಯರ ಹಾಸ್ಟೆಲ್ನ ಬಾತ್ರೂಮಿನ ಪಕ್ಕ ಕಾಮುಕನೋರ್ವ ಸಿಸಿ ಕ್ಯಾಮರಾ ಅಳವಡಿಸಿದ್ದ ಪ್ರಕರಣ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ. ಹುಡುಗಿಯರು ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಕ್ಯಾಮರಾ ಕಂಡಿದ್ದಾರೆ. ಕೃತ್ಯ ಎಸಗಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಸಲೀಂ (34) ಎಂಬಾತನೇ ಬಂಧಿತ ಆರೋಪಿ. ಖಾಸಗಿ ಕಟ್ಟಡದಲ್ಲಿ ನಡೆಸುತ್ತಿರುವ ವಸತಿ ನಿಲಯದಲ್ಲಿ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಹಾಸ್ಟೆಲ್ಗೆ ಹೊಂದಿಕೊಂಡಂತಿರುವ ಪಕ್ಕದ ಮನೆಯಲ್ಲಿಯೇ ಆರೋಪಿ ವಾಸವಿದ್ದ. ಈತ ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಎಂದಿನಂತೆ ವಿದ್ಯಾರ್ಥಿನಿಯರು ಸ್ನಾನಕ್ಕೆ ಬಾತ್ ರೂಮಿಗೆ ಹೋದಾಗ ಕಿಟಕಿ ಹೊರಗೆ ಸಿಸಿ ಕ್ಯಾಮರಾ ಕಾಣ್ತಿದಂತೆ ಹೊರಗೆ ಬಂದಿದ್ದಾರೆ. ಅಲ್ಲದೆ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಅಷ್ಟರಲ್ಲಾಗಲೇ ಸ್ಥಳಕ್ಕೆ ಸ್ಥಳೀಯರು ಆಗಮಿಸಿದ್ದು, ಎಸ್ಕೇಪ್ ಆಗಿದ್ದಾನೆ. ಬಳಿಕ ಪೊಲೀಸರು ಮತ್ತು ತಹಶಿಲ್ದಾರ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸಲೀಂ ಕುಟುಂಬಸ್ಥರನ್ನು ವಿಚಾರಣೆ ನಡೆಸಿ, ಆರೋಪಿಯನ್ನು ಸ್ಥಳಕ್ಕೆ ಕರೆಯಿಸಿ ಬಂಧಿಸಿದ್ದಾರೆ.
ಆನ್ಲೈನ್ನಲ್ಲಿ ಕ್ಯಾಮರಾ ತರಿಸಿದ್ದ:ಸ್ನಾನ ಮಾಡುವುದನ್ನು ಸೆರೆಹಿಡಿಯುವ ದುರುದ್ದೇಶದಿಂದ ಆರೋಪಿಯು ಆನ್ಲೈನ್ನಲ್ಲಿ ಸಿಸಿ ಕ್ಯಾಮರಾ ತರಿಸಿದ್ದಾನೆ. ತನ್ನ ಮನೆ ಛಾವಣಿಯಿಂದ ಹಾಸ್ಟೆಲ್ ಕಟ್ಟಡದ ಮೇಲೆ ಜಂಪ್ ಮಾಡಿ ಹಾಸ್ಟೆಲ್ಗೆ ಬಂದಿದ್ದ. ಬಳಿಕ ಉದ್ದದ ಒಂದು ಪೈಪ್ಗೆ ಸಿಸಿ ಕ್ಯಾಮರಾ ಅಳವಡಿಸಿ, ಅದನ್ನು ಬಾಲಕಿಯರ ಬಾತ್ ರೂಂ ಕಿಟಕಿಗೆ ಇಳಿಬಿಟ್ಟಿದ್ದ. ಬಾಲಕಿಯರು ಸ್ನಾನ ಮಾಡುವುದನ್ನು ವೈಫೈ ಮೂಲಕ ತನ್ನ ಮೊಬೈಲ್ನಲ್ಲಿ ವೀಕ್ಷಿಸಲು ಮುಂದಾಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಬಾಲಕಿಯರು ಬೆಳಿಗ್ಗೆ 6 ಗಂಟೆ ವೇಳೆಗೆ ಸ್ನಾನಕ್ಕೆ ಹೋದಾಗ ಕಿಟಕಿಯಲ್ಲಿ ಸಿಸಿ ಕ್ಯಾಮರಾ ಕಾಣಿಸಿದೆ. ವಿಕೃತ ಕಾಮಿ ಕಳೆದ ಎರಡ್ಮೂರು ದಿನಗಳಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್ಗೆ ಭೇಟಿ ನೀಡಿರುವ ಜೇವರ್ಗಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಬಾಲಕಿಯರಿಂದ ಮಾಹಿತಿ ಕಲೆ ಹಾಕಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಲೀಂನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಬಳಿ ಬಾಲಕಿಯರ ಖಾಸಗಿ ವಿಡಿಯೋ ಇವೆಯಾ ಎಂಬ ಕುರಿತಾಗಿಯೂ ವಿಚಾರಣೆ ಮುಂದುವರೆದಿದೆ.
ಇದನ್ನೂ ಓದಿ:ಕಲಬುರಗಿ: ದೇವಸ್ಥಾನದ ಬಾವಿಯಲ್ಲಿ ಯುವತಿಯ ಶವ ಪತ್ತೆ; ಕುಟುಂಬಸ್ಥರಿಂದ ಕೊಲೆ ಆರೋಪ