ಕಲಬುರಗಿ:ಬಿಜೆಪಿಯವರಿಗೆ ಅಭಿವೃದ್ಧಿ ಮುಖ್ಯವಲ್ಲ, ಬೇರೆ ಪಕ್ಷ ದುರ್ಬಲಗೊಳಿಸುವುದೇ ಮುಖ್ಯವಾಗಿದೆ. ಗೋವಾದಲ್ಲಿ ಕಾಂಗ್ರೆಸ್ಗೆ ಮುಗಿಸಬೇಕು ಎಂದು 8 ಜನರನ್ನು ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಮುಗಿಸಬೇಕು ಅನ್ನೋ ದೃಷ್ಟಿಯಿಂದ ಹೀಗೆ ಮಾಡ್ತಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ ನಗರದಲ್ಲಿ ಮಾತನಾಡಿದ ಖರ್ಗೆ, ಕೇಂದ್ರದ ನಡೆಯಿಂದ ಜನ ಬೇಸತ್ತಿದ್ದಾರೆ. ಡಾಲರ್ ಎದುರು ದಿನದಿನಕ್ಕೆ ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿದೆ. ಜಿಡಿಪಿ ಕೂಡಾ ಇಳಿಯುವ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಆದರೂ ದೇಶದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲೂ ಬೇರೆ ಪಕ್ಷ ದುರ್ಬಲಗೊಳಿಸಲು ಮುಂದಾಗಿದೆ. ನನ್ನ 51 ವರ್ಷದ ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಆದರೀಗ ಜಲಸ್ಸಿ ಕಾರಣ, ಒಬ್ಬರನ್ನೊಬ್ಬರು ಮುಗಿಸುವಂತಹದ್ದು ನಡಿಯುತ್ತಿದೆ ಎಂದರು.
ಎನ್ಐಎ ದಾಳಿ ಉದ್ದೇಶ ಗೊತ್ತಾಗ್ತಿಲ್ಲ:ಯಾವ ಉದ್ದೇಶಕ್ಕಾಗಿ ಎನ್ಐಎ ದಾಳಿ ಮಾಡ್ತಾರೆ ಅಂತಾ ನಮಗೆನೂ ಹೇಳಿಲ್ಲ. ಮಾಧ್ಯಮದಲ್ಲಿ ಬಂದಿಲ್ಲ.. ಯಾರು ದೇಶದ್ರೋಹಿ ಕೆಲಸ ಮಾಡ್ತಾರೆ, ಅವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರ ಇದೆ. ಆದರೆ ಯಾವುದೇ ಸಂಸ್ಥೆ ಮೇಲೆ ಕ್ರಮ ತೆಗೆದುಕೊಳ್ಳುವಾಗ ಸಾಧಕ - ಬಾಧಕ ನೋಡಬೇಕು.
ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯವಾಗಿ ದಾಳಿಗಳು ನಡೆಯುತ್ತಿವೆ. ಸದ್ಯ ದೇಶದಲ್ಲಿ ಸರಿಯಾದ ವಾತಾವರಣ ಇಲ್ಲ ಎಂದು ಖರ್ಗೆ ಟೀಕಿಸಿದರು. ನಾವು ದೇಶದ್ರೋಹಿ ಕೆಲಸ ಮಾಡುವವರಿಗೆ ರಕ್ಷಣೆ ಕೊಡುವವರಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಕೊಡಿ, ಆದರೆ ಅನಾವಶ್ಯಕವಾಗಿ ಯಾರಿಗೂ ತೊಂದರೆ ಕೊಡಬೇಡಿ. ದೇಶದಲ್ಲಿ ಅಶಾಂತಿ ಉಂಟು ಮಾಡುವ ಬಗ್ಗೆ ನಾವು ಎಂದಿಗೂ ಸಹಿಸಿಲ್ಲ, ಸಹಿಸೋದಿಲ್ಲ ಎಂದು ಎಚ್ಚರಿಸಿದರು.