ಕಲಬುರಗಿ: ಬೇರೆಯವರ ರೀತಿ ನಾವು ಬೋಗಸ್ ಭರವಸೆ ಕೊಡುವುದಿಲ್ಲ, ನುಡಿದಂತೆ ನಡೆಯುವ ಸರ್ಕಾರವೇ ಕಾಂಗ್ರೆಸ್ ಸರ್ಕಾರ. ಈ ಹಿಂದೆ ಪ್ರಧಾನಿ ಮೋದಿಯವರು ನಾನು ಅಧಿಕಾರಿಕ್ಕೆ ಬಂದ ಮೇಲೆ ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿ ಕೊಡುತ್ತೇನೆ ಅಂತ ಭರವಸೆ ಕೊಟ್ಟಿದ್ದರು. ದೇಶದ ಪ್ರಧಾನಮಂತ್ರಿ ವಚನ ಭ್ರಷ್ಟರಾಗಲು ಸಾಧ್ಯನಾ? ಪಾಪ ಕೊಟ್ಟಿರಬೇಕು, ನೀವು ತಗೊಂಡು ಸುಳ್ಳು ಹೇಳ್ತಾ ಇದ್ದೀರಿ ಅಂತ ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯ ಎನ್ವಿ ಮೈದಾನದಲ್ಲಿ ಆಯೋಜಿಸಿದ್ದ ಗೃಹಜ್ಯೋತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಖರ್ಗೆ, ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಭರವಸೆಯನ್ನು ಮೋದಿ ಕೊಟ್ಟಿದ್ದರು. ಆದ್ರೆ ಮರೆತರು ಎಂದು ಹರಿಹಾಯ್ದರು.
ಪ್ರಧಾನಿ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದ್ರೆ ತಾವು ಮಾತು ಕೊಟ್ಟು ಮರೆತಿದ್ದಿರಿ. ಎಲ್ಲೆಡೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಅನೇಕ ಕಡೆ ಮೋದಿ ಅವರು ಪ್ರತ್ಯಕ್ಷ ಹಾಗೂ ಪರೋಕ್ಷ ಟೀಕೆ ಮಾಡುತ್ತಿದ್ದಾರೆ. ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದ್ರೆ ದಿವಾಳಿ ಆಗ್ತಾರೆ ಅಂತ ಸರ್ಕಾರಿ ಕಾರ್ಯಕ್ರಮಗಳಲ್ಲಿ ದೂರುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರದಿಂದ ಯಾವುದೇ ಕೊಡುಗೆ ಇಲ್ಲ. ಆದ್ರೆ ಬೈಯುವುದು ಮಾತ್ರ ಬಿಡುವುದಿಲ್ಲ. ಇವರು ಕಪ್ಪಗಿದ್ದಾರೆ ಅವರು ಕೆಳಗಿನವರು ಇದ್ದಾರೆ ಎಂಬಂತಹ ಮಾತುಗಳನ್ನಾಡ್ತಾರೆ. ಅಂತಹ ಹಗುರ ಮಾತನಾಡುವವರ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಅವರಿಗೆ ಬಿಟ್ಟ ವಿಷಯ. ಆದ್ರೆ ಈ ದೇಶ ಸುರಕ್ಷಿತವಾಗಿ ಉಳಿಬೇಕಾದ್ರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ಇಂಡಿಯಾ ಪಕ್ಷ ಅಧಿಕಾರಕ್ಕೆ ಬರಬೇಕು. ಒಬ್ಬಿಬ್ಬರ ಹಿತಕ್ಕಾಗಿ ಅಲ್ಲ ಸಮಾಜದ, ಬಡವರ, ಮಹಿಳೆಯರ, ದೀನದಲಿತರ ಹಿತಕ್ಕಾಗಿ ಮತ್ತು ಪ್ರಜಾಪ್ರಭುತ್ವ ಸಂವಿಧಾನ ರಕ್ಷಣೆಗೋಸ್ಕರ ಎಲ್ಲರೂ ಕಟಿಬದ್ಧರಾಗಿ ಇಂಡಿಯಾ ಒಕ್ಕೂಟದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೇಗೇರಿಸಿ:ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ದ್ವಿಪಥದಿಂದ ಆರು ಪಥಕ್ಕೆ ಮೇಲ್ದರ್ಜೇಗೇರಿಸಬೇಕು. ಬೆಂಗಳೂರು-ಮೈಸೂರು 10 ಪಥ ಇವೆ. ಇಲ್ಲಿ ದ್ವಿಪಥ ರಸ್ತೆಗಳೇ ಸರಿಯಾಗಿಲ್ಲ. ರಸ್ತೆ ಅಭಿವೃದ್ಧಿಯ ಪ್ರತೀಕವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರದಿಂದಾಗಲಿ, ಜಂಟಿ ಸಹಭಾಗಿತ್ವ, ಪಿ.ಪಿ.ಪಿ. ಮಾಡೆಲ್ ಯಾವುದೇ ವಿಧದಲ್ಲಿ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದರು.
ತಾವು ಈ ಹಿಂದೆ 9 ತಿಂಗಳು ಅಲ್ಪಕಾಲ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ರಾಜ್ಯದಲ್ಲಿ 37 ಹೊಸ ರೈಲು ಓಡಿಸಿದ್ದೆ. ಸಾವಿರಾರು ಕೋಟಿ ರೂ. ಅನುದಾನ ರಾಜ್ಯಕ್ಕೆ ತಂದು ರೈಲ್ವೆ ಮೂಲಸೌಕರ್ಯ ಬಲಪಡಿಸಿದ್ದೇನೆ. ಯಾವುದೇ ಕೆಲಸ ಆಗಬೇಕಾದರೆ ಇಚ್ಛಾಶಕ್ತಿ ತುಂಬಾ ಮುಖ್ಯ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣದ ವ್ಯವಸ್ಥೆ ತುಂಬಾ ಕೆಳಮಟ್ಟದಲ್ಲಿದೆ. ಪ್ರತಿ ವರ್ಷ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಫಲಿತಾಂಶ ಬಂದಾಗ ರ್ಯಾಂಕಿಂಗ್ ಪಟ್ಟಿ ನೋಡುವಾಗ ನಾವು ಕೆಳಗಿನಿಂದ ನೋಡಬೇಕಾದ ಪರಿಸ್ಥಿತಿ ಇದೆ. ಇದು ಬದಲಾಗಬೇಕಿದೆ. ಇದಕ್ಕೆ ಮೂಲ ಕಾರಣ ಇಲ್ಲಿ ಗಣಿತ, ಇಂಗ್ಲೀಷ್, ವಿಜ್ಞಾನ ಶಿಕ್ಷಕರು ಇಲ್ಲದಿರುವುದು. ಶಿಕ್ಷಕರ ಸಮಸ್ಯೆ ನೀಗಿಸಿದಲ್ಲಿ ನಮ್ಮ ಮಕ್ಕಳು ಇತರರಂತೆ ವಿದ್ಯಾವಂತರಾಗಲಿದ್ದಾರೆ. ಪ್ರದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದ ಹೆಚ್ಚಿನ ಆದ್ಯತೆ ನೀಡಬೇಕು, ಮೂಲಸೌಕರ್ಯ ಹೆಚ್ಚಿಸಬೇಕು ಎಂದರು.
ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದು 2 ತಿಂಗಳಾಗಿವೆ. ಈಗಲೇ 5 ವರ್ಷಗಳ ಯೋಜನೆಗಳು ಜಾರಿಗೆ ವಿರೋಧ ಪಕ್ಷಗಳು ಒತ್ತಾಯ ಮಾಡಡುತ್ತಿರುವುದು ಹಾಸ್ಯಾಸ್ಪದವಾಗಿದೆ. 5 ವರ್ಷದ ಕೆಲಸಗಳನ್ನು 2 ತಿಂಗಳಲ್ಲಿ ಮಾಡಲು ಇದು ಜಾದೂ ಅಲ್ಲ. ಹಂತ-ಹಂತವಾಗಿ ಚುನಾವಣಾ ಪೂರ್ವ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುತ್ತದೆ. 3 ದಶಕದಿಂದ ಆಗದ 371ಜೆ ತಿದ್ದುಪಡಿ ಕೆಲಸವನ್ನು ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿಯೇ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಮಾಡಿರುವೆ ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ವಿದ್ಯುಕ್ತ ಚಾಲನೆ.. ಸಾಂಕೇತಿಕವಾಗಿ 10 ಜನರಿಗೆ ಶೂನ್ಯ ವಿದ್ಯುತ್ ಬಿಲ್ ವಿತರಣೆ