ಕಲಬುರಗಿ:ಹಿಮಾಚಲ ಪ್ರದೇಶದಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಪಕ್ಷ ಇದೀಗ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕದಿಂದ ರಣಕಹಳೆ ಊದಲು ಸಿದ್ಧವಾಗಿದೆ. ಎಐಸಿಸಿ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ತವರಿಗೆ ಆಗಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವಾಗತ ಕೋರುವ ಮತ್ತು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಜನರನ್ನು ಸೇರಿಸಿ 'ಕಲ್ಯಾಣ ಕ್ರಾಂತಿ ಸಮಾವೇಶ' ನಡೆಸುವ ಮೂಲಕ ಕರ್ನಾಟಕದಲ್ಲಿ ಕೈ ಪಕ್ಷ ಗಟ್ಟಿಯಾಗಿ ನೆಲೆಯೂರಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ.
ಖರ್ಗೆ ಅವರನ್ನು ಸ್ವಾಗತಿಸಲು ಕೆಪಿಸಿಸಿ ಹಾಗೂ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಂಟಿಯಾಗಿ ಭರ್ಜರಿ ತಯಾರಿ ನಡೆಸಿದೆ. ನಗರದ ಎನ್.ವಿ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು ರಾಜ್ಯ ನಾಯಕರ ದಂಡೇ ಪಾಲ್ಗೊಳ್ಳಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಅನೇಕ ನಾಯಕರು ಕಲಬುರಗಿಯಲ್ಲಿ ಬೀಡುಬಿಟ್ಟು ಸಮಾವೇಶದ ಸಿದ್ದತೆಯಲ್ಲಿ ನಿರತರಾಗಿದ್ದಾರೆ. ನಗರದೆಲ್ಲೆಡೆ ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿ ಬಾವುಟ, ಫ್ಲೆಕ್ಸ್, ಕಟೌಟ್‌ಗಳು ರಾರಾಜಿಸುತ್ತಿವೆ.