ಸೇಡಂ:11ನೇ ಶತಮಾನದಲ್ಲಿ ರಾಜಧಾನಿಯಾಗಿ ಮೆರೆದ ಮಳಖೇಡ ಮತ್ತು ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕೋಟೆ ಐತಿಹಾಸಿಕ ಪ್ರವಾಸಿ ತಾಣವಾಗಿಸಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ಬರಹಗಾರ ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆಗ್ರಹಿಸಿದ್ದಾರೆ.
ತಾಲೂಕಿನ ಮಳಖೇಡ ಗ್ರಾಮದ ರಾಷ್ಟ್ರಕೂಟರ ರಾಜಧಾನಿ ಮಳಖೇಡದ ಕೋಟೆಯಲ್ಲಿ ಯುವ ಬ್ರಿಗೇಡ್ನ ರೆಲ್ಲೋ ಪ್ಲೇಕ್ ಉದ್ಘಾಟಿಸಿ ಅವರು ಮಾತನಾಡಿದರು. ಅಮೋಘವರ್ಷ ನೃಪತುಂಗ ಚಕ್ರವರ್ತಿಯ ಇತಿಹಾಸವನ್ನು ಅರಿತರೆ ಮೈ ರೋಮಾಂಚನವೆನಿಸುತ್ತದೆ. ರಾಜ್ಯದಲ್ಲಿ ಅಮೋಘವರ್ಷ ನೃಪತುಂಗ ರಾಜನಿಗೆ ಸಮಾನ ರಾಜ ಮತ್ತೊಬ್ಬರಿಲ್ಲ. ತನ್ನ ಮಗ ರಾಜ್ಯಕ್ಕೆ ವಿರುದ್ಧವಾಗಿ ನಿಂತುಕೊಂಡಾಗ ಮಗನನ್ನೇ ಮರಣದಂಡನೆಗೆ ಗುರಿಯಾಗಿಸಿದ್ದ. ಐತಿಹಾಸಿಕ ಹಿನ್ನೆಲೆಯುಳ್ಳ ಕೋಟೆ ಕೊತ್ತಲಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳು. ಅವುಗಳು ನಾಶವಾದರೆ ಇಡೀ ಸಂಸ್ಕೃತಿ, ಪರಂಪರೆಯೇ ನಾಶವಾದಂತೆ ಎಂದರು.