ಕಲಬುರಗಿ: ಮಕ್ಕಳ ಕೈಗೆ ಕಾಂಗ್ರೆಸ್ ಪಕ್ಷವನ್ನು ಕೊಟ್ಟಂತಾಗಿದ್ದು, ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ರಾಜ್ಯಮಟ್ಟದಲ್ಲಿ ಪ್ರಿಯಾಂಕ್ ಖರ್ಗೆ ಚೈಲ್ಡಿಷ್ ನಂತೆ ವರ್ತಿಸುತ್ತಿದ್ದಾರೆ. ಹಿರಿಯರು ಕಿರಿಯರು ತಿಳಿಯದ ಇವರು ನಮಗೆ ಫಿಲಾಸಫಿ ಹೇಳೋಕೆ ಹೊರಟಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ್ ಪ್ರಿಯಾಂಕ್ ಖರ್ಗೆಯಿಂದಲೇ ಕಾಂಗ್ರೆಸ್ ಹಾಳಾಗಿದ್ದು, ಇಂತವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಶೋಲೆ ಚಿತ್ರದ ಗಬ್ಬರ್ ಸಿಂಗ್ ಹಾಗೂ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ ಸಾಂಬಾ ಇದ್ದಂತೆ, ಗಬ್ಬರ ಸಿಂಗ್ ಹೇಳಿದ ಮೇಲೆ ಸಾಂಬಾ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಭ್ರಷ್ಟಾಚಾರ ಆಗಿದ್ದರೆ ದಾಖಲೆ ತನ್ನಿ, ವಿಧಾನಸಭೆಯಲ್ಲಿ ಚರ್ಚಿಸಿ, ಆಡಳಿತ ವೈಫಲ್ಯ ಕಂಡಿದ್ದರೆ, ದಾಖಲೆ ಕೊಡಿ, ಅದನ್ನು ಬಿಟ್ಟು ಬಾಯಿಗೆ ಬಂದಂತೆ ಹೇಳಿಕೆ ನೀಡಬೇಡಿ ಎಂದು ಶರಣಪ್ರಕಾಶ್ ಮತ್ತು ಪ್ರಿಯಾಂಕ್ ಖರ್ಗೆಗೆ ಗುತ್ತೆದಾರ್ ತಾಕೀತು ಮಾಡಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಹಿನ್ನೆಲೆ ಗ್ರಾಮೀಣ ಕ್ಷೇತ್ರದ ಶಾಸಕರ ಪತ್ನಿ ಕಾರ್ ಸೀಜ್ ಕುರಿತು, ಕಾಂಗ್ರೆಸ್ - ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದೆ. ಪ್ರಿಯಾಂಕ್ ಖರ್ಗೆ ನಂತರ ಶರಣಪ್ರಕಾಶ ಪಾಟೀಲ್ ಸೇರಿ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲೆ ಗುತ್ತೆದಾರ್ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಬದಿಗಿಟ್ಟು ವೈಯಕ್ತಿಕ ಜಗಳದಂತೆ ಎರಡು ಪಕ್ಷದ ನಾಯಕರು ಕಿತ್ತಾಡಿಕೊಳ್ಳುತ್ತಿದ್ದು, ಜನರು ಶಾಂತಚಿತ್ತದಿಂದ ಎಲ್ಲವನ್ನು ನೋಡುತ್ತಿದ್ದಾರೆ.