ಕಲಬುರಗಿ : ಯುವ ಪ್ರೇಮಿಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಮಲಾಪುರ್ ತಾಲೂಕಿನ ಡೊಂಗರಗಾಂವ್ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಅಕ್ಷತಾ ಭರಣಿ (19) ಹಾಗೂ ಪಾಂಡುರಂಗ್ ಕಿಣ್ಣಿ(20) ಎಂದು ಗುರುತಿಸಲಾಗಿದೆ. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಯುವ ಪ್ರೇಮಿಗಳ ಸಾವಿಗೆ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಕುಟುಂಬಸ್ಥರ ವಿರೋಧದಿಂದ ಸಾವಿಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮೃತರಿಬ್ಬರು ಕಳೆದ ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಕಳೆದ ಶುಕ್ರವಾರ ಬೆಳಗ್ಗೆ ಮನೆಯಿಂದ ಇಬ್ಬರು ನಾಪತ್ತೆಯಾಗಿದ್ದರು. ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ಇಬ್ಬರ ಮನೆಯವರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಈ ಸಂಬಂಧ ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದು ಪತ್ತೆಯಾದ ಶವಗಳನ್ನು ಕಂಡು ಕುರಿಗಾಹಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಮಲಾಪುರ್ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.