ಕಲಬುರಗಿ: ಕೊಲೆಗೆ ಸುಪಾರಿ ಪಡೆದ ಪ್ರೇಯಸಿಯೇ ಪ್ರಿಯಕರನ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಕೊಲೆಯ ನೇರ ದೃಶ್ಯಾವಳಿಯನ್ನು ಮೊಬೈಲ್ನಲ್ಲಿ ಸೆರೆಹಿಡಿದ ಪ್ರೇಯಸಿ ತನ್ನ ಮತ್ತೊಬ್ಬ ಪ್ರಿಯಕರನಿಗೆ ಕಳುಹಿಸಿದ್ದಾಳೆ. ಈಗ ಹಂತಕಿ ಪೊಲೀಸರ ಅತಿಥಿ.
ವಿವರ: ಜೂನ್ 24ರಂದು ನಗರದ ಹೊರವಲಯದ ವಾಜಪೇಯಿ ಬಡಾವಣೆಯ ಬಳಿ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದ ದಯಾನಂದ ಲಾಡಂತಿ (24) ಎಂಬ ಯುವಕನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಆದರೆ, ತನಿಖೆಯ ಸಂದರ್ಭದಲ್ಲಿ ಕೊಲೆಯ ಹಿನ್ನೆಲೆ ಕೇಳಿ ಪೊಲೀಸರೇ ಅರೆಕ್ಷಣ ದಂಗಾಗಿ ಬಿಟ್ಟಿದ್ದರು.
ದಯಾನಂದ ದುಬೈನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತನ್ನೂರಿಗೆ ಬಂದು ಮತ್ತೆ ಮರಳಿ ದುಬೈ ಹೋಗಲು ಸಿದ್ಧತೆ ನಡೆಸಿದ್ದರು. ಈ ನಡುವೆ ಕಲಬುರಗಿಯ ಬಸವೇಶ್ವರ ಕಾಲೋನಿ ನಿವಾಸಿ ಅಂಬಿಕಾ ಎಂಬ ವಿವಾಹಿತ ಮಹಿಳೆಯಿಂದ ದಯಾನಂದರ ಮೊಬೈಲ್ಗೆ ಕರೆಬಂದಿದೆ. ಮಿಸ್ ಆಗಿ ಬಂದಿದ್ದ ಮೊಬೈಲ್ ಕರೆ ದಯಾನಂದನಿಗೆ ಅಂಬಿಕಾಳ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿತ್ತು. ಇನ್ನೂ ಮದುವೆಯಾಗದ ಆತ ಮೂರೇ ದಿನಗಳಲ್ಲಿ ಸಂಪೂರ್ಣವಾಗಿ ಆಕೆಯ ಬಲೆಗೆ ಬಿದ್ದಿದ್ದಾನೆ. ಆದರೆ, ಅಂಬಿಕಾ ದಯಾನಂದನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಆತನನ್ನು ತನ್ನ ಬಲೆಗೆ ಹಾಕಿಕೊಂಡಿದ್ದಳು ಎಂದು ತನಿಖೆಯ ಮೂಲಕ ತಿಳಿದು ಬಂದಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಸೋದರ ಸಂಬಂಧಿಗಳಿಂದಲೇ ಯುವಕನ ಕೊಲೆ?
ಅಂಬಿಕಾಳ ಮೊಸದ ಬಗ್ಗೆ ಅರಿವಿಲ್ಲದ ದಯಾನಂದ ಆಕೆ ಬಾ ಅಂತ ಕರೆದಿದ್ದೇ ತಡ ಕಲಬುರಗಿಗೆ ಓಡೋಡಿ ಬಂದಿದ್ದ. ಹೀಗೆ ಧಾವಿಸಿ ಬಂದಿದ್ದ ದಯಾನಂದನನ್ನು ಅಂಬಿಕಾ ತನ್ನ ಸ್ಕೂಟಿಯಲ್ಲಿ ವಾಜಪೇಯಿ ಬಡಾವಣೆ ಬಳಿ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಆಟೋದಲ್ಲಿ ಬಂದಿದ್ದ ಕಲಬುರಗಿ ನಗರದ ಶಹಬಜಾರ್ ನಿವಾಸಿಗಳಾದ ಕೃಷ್ಣಾ, ನೀಲಕಂಠ, ಸುರೇಶ್, ಸಂತೋಷ್ ಎಂಬವರ ಮುಂದೆ ದಯಾನಂದ್ನನ್ನು ನಿಲ್ಲಿಸಿದ್ದಳು. ನಂತರ ಸ್ವತ: ಮುಂದೆ ನಿಂತು ಆತನನ್ನು ನಿರ್ದಯವಾಗಿ ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.
ಹತ್ಯೆಯ ಲೈವ್ ವಿಡಿಯೋ ಮಾಡಿ ಸಿಕ್ಕಿಬಿದ್ಳು ಮಾಯಾಂಗಿನಿ ಯಾದಗಿರಿ ಜಿಲ್ಲೆಯ ಕೊಡೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಸುರಕ್ಷಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅಂಬಿಕಾಗೆ ಈಗಾಗಲೇ ಮದುವೆಯಾಗಿದೆ. ಓರ್ವ ಮಗಳಿದ್ದಾಳೆ. ಹೀಗಿದ್ದರೂ ದಯಾನಂದನ ಸಹೋದರ ಸಂಬಂಧಿ ಅನಿಲ್ ಎಂಬಾತನೊಂದಿಗೆ ಫೇಸ್ಬುಕ್ನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಳು. ಅನಿಲ್ ಸಿಆರ್‌ಪಿಎಫ್ ಯೋಧನಾದ ಹಿನ್ನೆಲೆಯಲ್ಲಿ ಗಡಿಯಲ್ಲಿ ಕೆಲಸ ಮಾಡುತ್ತಿದ್ದ.
ಇತ್ತ ದಯಾನಂದ ಅನಿಲ್ ಹೆಂಡತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದಯಾನಂದನನ್ನು ಕೊಲೆ ಮಾಡಲು ತನ್ನ ಪ್ರೇಯಸಿ ಅಂಬಿಕಾಳಿಗೆ ಸುಪಾರಿ ಕೊಟ್ಟಿದ್ದನಂತೆ. ಸುಪಾರಿ ಪಡೆದ ಅಂಬಿಕಾ ದಯಾನಂದನ ಜೊತೆ ಪ್ರೀತಿಯ ನಾಟಕವಾಡಿ ಆತನ ಉಸಿರು ನಿಲ್ಲಿಸಿದ್ದಾಳೆ. ಬಳಿಕ ಪ್ರಿಯಕರನಿಗೆ ತನ್ನ ಮೊಬೈಲ್ದಿಂದ ಕೊಲೆಯ ಲೈವ್ ವಿಡಿಯೋ ಚಿತ್ರೀಕರಿಸಿ ಕಳುಹಿಸಿದ್ದಳು. ಇದೀಗ ಈ ವಿಡಿಯೋ ವೈರಲ್ ಆಗಿದೆ. ದಯಾನಂದನ ಕೊಲೆಗೆ ಅಂಬಿಕಾ & ಗ್ಯಾಂಗ್ 3 ಲಕ್ಷ ರೂಪಾಯಿಗೆ ಸುಪಾರಿ ಪಡೆದಿದ್ದರು.
ದಯಾನಂದನ ಕೊಲೆಗೆ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಗ್ರಾಮದವರೇ ಕೊಲೆ ಮಾಡಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ಈ ಮೊದಲು ದೂರು ನೀಡಿದ್ದರು. ಆದ್ರೀಗ ಕೊಲೆ ಮಾಡಿದ್ದು ಗ್ರಾಮದವರಲ್ಲ, ವಿವಾಹಿತ ಮಹಿಳೆ ಮತ್ತು ಆಕೆಯ ಸಹಚರರು ಅನ್ನೋದು ಬಟಾಬಯಲಾಗಿದೆ. ಅಂಬಿಕಾ ಸೇರಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.