ಕಲಬುರಗಿ:ಜಿಮ್ಸ್ ಆಸ್ಪತ್ರೆಗೆ ಇಂದು ಸಂಜೆ ದಿಢೀರ್ ಭೇಟಿ ನೀಡಿದ ಕಲಬುರಗಿ ಲೋಕಾಯುಕ್ತ ಎಸ್ಪಿಎಆರ್ ಕರ್ನೂಲ್, ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಕುರಿತು ಪರಿಶೀಲನೆ ನಡೆಸಿದರು. ಒಪಿಡಿ ಕೌಂಟರ್ನಲ್ಲಿ ಹೆಚ್ಚಿನ ರೋಗಿಗಳು ನಿಂತಿರುವುದನ್ನು ಕಂಡ ಅವರು, ಕೌಂಟರ್ ಹೆಚ್ಚಳ ಮಾಡುವಂತೆ ಮತ್ತು ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಪ್ರತ್ಯೇಕ ಕೌಂಟರ್ ತೆರೆಯುವಂತೆ ಸ್ಥಳದಲ್ಲಿದ್ದ ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್ ಅವರಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಯಲ್ಲಿ ರೋಗಿಗಳು ಎಲ್ಲಿ ಬೇಕಾದಲ್ಲಿ ನಿಂತಿದ್ದನ್ನು ಗಮನಿಸಿ ಅವರಿಗೆ ಕುಳಿತುಕೊಳ್ಳಲು ಅಲ್ಲಲ್ಲಿ ಆಸನದ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದರು. ಆಸ್ಪತ್ರೆಯ ಒಳರೋಗಿ ವಿಭಾಗ, ಅಡುಗೆ ಕೋಣೆ, ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ, ರೋಗಿಗಳಿಗೆ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಊಟೋಪಚಾರದ ಬಗ್ಗೆ ರೋಗಿಗಳಿಂದಲೇ ಮಾಹಿತಿ ಪಡೆದರು.